ಫಾಸ್ಟ್ಯಾಗ್ ಬಳಕೆದಾರರಲ್ಲದವರಿಗೆ ಅವರ ಟೋಲ್ ಶುಲ್ಕ ಪಾವತಿಯ ವಿಧಾನವನ್ನು ಆಧರಿಸಿ ವಿಭಿನ್ನ ಶುಲ್ಕಗಳನ್ನು ವಿಧಿಸಲು ರಸ್ತೆ ಸಾರಿಗೆ ಹಾಗೂ ಹೆದ್ದಾರಿ (ಎಂಓಆರ್ಟಿಎಚ್) ಸಚಿವಾಲಯವು ರಾಷ್ಟ್ರೀಯ ಹೆದ್ದಾರಿ ಶುಲ್ಕ ( ದರಗಳು ಹಾಗೂ ಆದಾಯ ನಿರ್ಧಾರ) ನಿಯಮಗಳು,2008 ಅನ್ನು ತಿದ್ದುಪಡಿಗೊಳಿಸಿದೆ. ಟೋಲ್ ಫ್ಲಾಝಾಗಳಲ್ಲಿ ಡಿಜಿಟಲ್ ವಹಿವಾಟುಗಳನ್ನು ಉತ್ತೇಜಿಸುವುದು ಹಾಗೂ ನಗದು ಬಳಕೆಯನ್ನು ಕಡಿಮೆಗೊಳಿಸುವುದು ಈ ಕ್ರಮದ ಉದ್ದೇಶವಾಗಿದೆ ಎಂದು ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯವು ಶನಿವಾರ ಬಿಡುಗಡೆಗೊಳಿಸಿದ ಹೇಳಿಕೆ ತಿಳಿಸಿದೆ.
ಒಂದು ವೇಳೆ ಸಕ್ರಿಯವಾದ ಫಾಸ್‌ಟ್ಯಾಗ್ ಇಲ್ಲದ ಬಳಕೆದಾರನು ಯುಪಿಐ (ಜಿಪೇ, ಫೋನ್ ಪೇ ಇತ್ಯಾದಿ) ಮೂಲಕ ಹಣಪಾವತಿಸಲು ಬಯಸಿದಲ್ಲಿ ಆತ, ಆ ಮಾದರಿಯ ವಾಹನಕ್ಕೆ ನಿಗದಿಪಡಿಸಲಾದ ಟೋಲ್ ಶುಲ್ಕಕ್ಕಿಂತ 1.25 ಪಟ್ಟು ಅಧಿಕ ಹಣ ಪಾವತಿಸಬೇಕಾಗುತ್ತದೆ.
ಉದಾಹರಣೆಗೆ, ಒಂದು ವಾಹನಕ್ಕೆ ಫಾಸ್‌ಟ್ಯಾಗ್ ಮೂಲಕ 100 ರೂ. ಟೋಲ್ ಶುಲ್ಕವನ್ನು ಪಾವತಿಸಬೇಕಾಗಿದ್ದರೆ, ನಗದು ರೂಪದಲ್ಲಿ 200 ರೂ. ಹಾಗೂ ಯುಪಿಐ ಮೂಲಕ 125 ರೂ. ಪಾವತಿಸಬೇಕಾಗುತ್ತದೆ ಎಂದು ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ದೇಶಾದ್ಯಂತ ಬಹುತೇಕ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಫಾಸ್ ಟ್ಯಾಗ್ ಬಳಕೆಯಾಗುತ್ತಿದ್ದು, ಇದು ವಾಹನಗಳ ಕಾಯುವಿಕೆಯ ಅವಧಿಯನ್ನು ಹಾಗೂ ಸಂಚಾರದಟ್ಟಣೆಯನ್ನು ಕಡಿಮೆಗೊಳಿಸಿದೆ. ಈ ತಿದ್ದುಪಡಿಯು ಟೋಲ್ ಶುಲ್ಕ ಸಂಗ್ರಹ ಪ್ರಕ್ರಿಯೆಯನ್ನು ಬಲಡಿಸುವ ಉದ್ದೇಶವನ್ನು ಹೊಂದಿದೆ.
ಟೋಲ್ ಶುಲ್ಕ ಪಾವತಿಗೆ ಯುಪಿಐ ಆಯ್ಕೆಯು ಫಾಸ್ ಟ್ಯಾಗ್ ಹೊಂದಿರದ ಅಪರೂಪದ ಹೆದ್ದಾರಿ ಬಳಕೆದಾರರಿಗೆ ಅನುಕೂಲಕರವಾದ ಪರ್ಯಾಯ ವ್ಯವಸ್ಥೆಯನ್ನು ಒದಗಿಸುತ್ತೆದೆ. ಅಲ್ಲದೆ ತಮ್ಮ ಫಾಸ್ ಟ್ಯಾಗ್‌ಗಳಿಗೆ ಸಂಬಂಧಿಸಿ ತಾತ್ಕಾಲಿಕವಾಗಿ ತಾಂತ್ರಿಕ ಸಮಸ್ಯೆಗಳನ್ನು ಎದುರಿಸುವ ಬಳಕೆದಾರರಿಗೆ ಅನುಕೂಲಕರವಾದ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸುತ್ತದೆ.




