HEALTH TIPS

ಮಕ್ಕಳ ಸರಣಿ ಸಾವು: 6 ರಾಜ್ಯಗಳ 19 ಔಷಧಿಗಳ ಉತ್ಪಾದನಾ ಘಟಕಗಳಲ್ಲಿ CDSCO ತಪಾಸಣೆ

ನವದೆಹಲಿ: ಮಧ್ಯಪ್ರದೇಶದಲ್ಲಿ ಕೆಮ್ಮಿನ ಸಿರಪ್ ಸೇವಿಸಿ ಮಕ್ಕಳು ಮೃತಪಟ್ಟಿರುವ ಬಗ್ಗೆ ವರದಿಯಾದ ಬೆನ್ನಲ್ಲೇ ಆರು ರಾಜ್ಯಗಳಲ್ಲಿ ಕೆಮ್ಮು ಸಿರಪ್‌ ಸೇರಿದಂತೆ ಇತರೆ 19 ಔಷಧಿಗಳ ಉತ್ಪಾದನಾ ಘಟಕಗಳಲ್ಲಿ ಕೇಂದ್ರ ಔಷಧ ನಿಯಂತ್ರಣ ಗುಣಮಟ್ಟ ಸಂಸ್ಥೆ (ಸಿಡಿಎಸ್‌ಸಿಒ) ತಪಾಸಣೆ ನಡೆಸಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಔಷಧ ಗುಣಮಟ್ಟ ವೈಫಲ್ಯಕ್ಕೆ ಕಾರಣವಾಗಬಹುದಾದ ಅಂಶಗಳನ್ನು ಪತ್ತೆಹಚ್ಚಲು ಮತ್ತು ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವ ಉದ್ದೇಶದಿಂದ ಸಿಡಿಎಸ್‌ಸಿಒ ಪರಿಶೀಲನೆ ನಡೆಸುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಮಕ್ಕಳ ಸಾವಿಗೆ ಕಾರಣ ಏನು ಇರಬಹುದೆಂದು ತಿಳಿಯಲು ರಾಷ್ಟ್ರೀಯ ವೈರಾಲಜಿ ಸಂಸ್ಥೆ, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ, ರಾಷ್ಟ್ರೀಯ ಪರಿಸರ ಎಂಜಿನಿಯರಿಂಗ್ ಸಂಶೋಧನಾ ಸಂಸ್ಥೆ, ಸಿಡಿಎಸ್‌ಸಿಒ ಮತ್ತು ಏಮ್ಸ್‌ ಸೇರಿದಂತೆ ಇತರ ಸಂಸ್ಥೆಗಳ ತಜ್ಞರನ್ನು ಒಳಗೊಂಡ ತಂಡವು ಮಧ್ಯಪ್ರದೇಶದ ಚಿಂದ್ವಾರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿಶ್ಲೇಷಣೆ ನಡೆಸುತ್ತಿದೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಮಧ್ಯಪ್ರದೇಶ ಸರ್ಕಾರದ ಮನವಿ ಮೇರೆಗೆ ತಮಿಳುನಾಡು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯು ತಮಿಳುನಾಡಿನ ಕಾಂಚೀಪುರಂನಲ್ಲಿರುವ ಶ್ರೀಸನ್ ಫಾರ್ಮಾ ಉತ್ಪಾದನಾ ಘಟಕದಿಂದ ಸಂಗ್ರಹಿಸಲಾದ 'ಕೋಲ್ಡ್ರಿಫ್' ಕೆಮ್ಮಿನ ಸಿರಪ್ ಮಾದರಿಗಳನ್ನು ಪರೀಕ್ಷೆಗೊಳಪಡಿಸಿದೆ ಎಂದು ಮೂಲಗಳು ತಿಳಿಸಿವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries