ಬದಿಯಡ್ಕ: ಭಾರತದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 156ನೇ ಜನ್ಮ ದಿನಾಚರಣೆ ಗುರುವಾರ ಪೆರಡಾಲ ನವಜೀವನ ಶಾಲೆಯಲ್ಲಿ ಆಯೋಜಿಸಲಾಗಿತ್ತು. ಆ ಪ್ರಯುಕ್ತ ಮೊದಲು
ಪೆರಡಾಲ ಎಜುಕೇಶನ್ ಸೊಸೈಟಿಯ ಕಾರ್ಯಕಾರಿ ಸಮಿತಿ ಸದಸ್ಯ ವೆಂಕಟ ಗಿರೀಶ್ ಪಟ್ಟಾಜೆ ಧ್ವಜಾರೋಹಣ ನೆರವೇರಿಸಿದರು. ಬಳಿಕ ನವೀಕರಿಸಿದ ಮಹಾತ್ಮ ಗಾಂಧೀಜಿಯವರ ಪುತ್ಥಳಿಗೆ ಹಾರಾರ್ಪಣೆಗೈದು ಮಾತನಾಡಿ, ಮಹಾತ್ಮ ಗಾಂಧೀಜಿಯವರ ಸ್ವಾತಂತ್ರ್ಯ ಹೋರಾಟದ ಅಸ್ತ್ರಗಳಾದ ಸತ್ಯ, ಅಹಿಂಸೆ, ಸತ್ಯಾಗ್ರಹ ಸರ್ವಕಾಲಿಕ. ಅವರ ತತ್ವಾದರ್ಶಗಳು ಭಾರತ ಮಾತ್ರವಲ್ಲದೆ ವಿದೇಶಗಳು ಕೂಡ ಕೊಂಡಾಡುತ್ತಿದೆ ಎಂದರು.
ಹಿರಿಯ ಅಧ್ಯಾಪಕಿ ಪ್ರಭಾವತಿ ಕೆದಿಲಾಯ, ನಟರಾಜ ಮಾಸ್ತರ್, ಅಧ್ಯಾಪ ವೃಂದ, ಸಿಬ್ಬಂದಿ ವರ್ಗ, ಮಾತೃ ಮಂಡಳಿ ಸದಸ್ಯರು, ಎನ್.ಸಿ.ಸಿ., ಎಸ್.ಪಿ.ಸಿ ಘಟಕದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಗಾಂಧಿ ಜಯಂತಿ ಪ್ರಯುಕ್ತ ಭಜನಾ ಕಾರ್ಯಕ್ರಮ ನಡೆಯಿತು. ಶ್ರೀನಿವಾಸ ಮಾಸ್ತರ್ ಸ್ವಾಗತಿಸಿ, ಬಿಂದು ಟೀಚರ್ ವಂದಿಸಿದರು. ನಿರಂಜನ್ ರೈ ಪೆರಡಾಲ ಕಾರ್ಯಕ್ರಮ ನಿರೂಪಿಸಿದರು.






