ನವಿ ಮುಂಬೈ: ಭಾರತದ ಮಹಿಳಾ ಕ್ರಿಕೆಟ್‌ನ ಉಪ ನಾಯಕಿ ಹಾಗೂ ಸ್ಟಾರ್ ಬ್ಯಾಟರ್ ಸ್ಮೃತಿ ಮಂಧಾನ ನ್ಯೂಝಿಲ್ಯಾಂಡ್ ವಿರುದ್ಧ ಗುರುವಾರ ನಡೆದ ಮಹಿಳೆಯರ ವಿಶ್ವಕಪ್‌ನ 24ನೇ ಪಂದ್ಯದಲ್ಲಿ 95 ಎಸೆತಗಳಲ್ಲಿ 10 ಬೌಂಡರಿ ಹಾಗೂ 4 ಸಿಕ್ಸರ್‌ಗಳ ಸಹಿತ 109 ರನ್ ಗಳಿಸಿದ್ದಾರೆ.
ಮಂಧಾನ ಅವರು ಪ್ರಸಕ್ತ ವಿಶ್ವಕಪ್ ಪಂದ್ಯಾವಳಿಯಲ್ಲಿ ಶತಕ ಗಳಿಸಿದ ಭಾರತದ ಮೊದಲ ಆಟಗಾರ್ತಿ ಎನಿಸಿಕೊಂಡರು. ಮಂಧಾನ ಅವರ ಆಕರ್ಷಕ ಇನಿಂಗ್ಸ್‌ಗೆ ಸುಝಿ ಬೇಟ್ಸ್ ತೆರೆ ಎಳೆದರು.
ಎಡಗೈ ಆಟಗಾರ್ತಿ ಮಂಧಾನ ಹಲವು ಅಂತರ್‌ರಾಷ್ಟ್ರೀಯ ದಾಖಲೆಗಳನ್ನು ಮುರಿದಿದ್ದಲ್ಲದೆ, ಕೆಲವು ದಾಖಲೆ ಸರಿಗಟ್ಟಿದರು. 17ನೇ ಅಂತರ್‌ರಾಷ್ಟ್ರೀಯ ಶತಕ ಗಳಿಸಿ ಮಹಿಳೆಯರ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಗರಿಷ್ಠ ಶತಕಗಳನ್ನು ಸಿಡಿಸಿದ್ದ ಆಸ್ಟ್ರೇಲಿಯದ ಮೆಗ್ ಲ್ಯಾನ್ನಿಂಗ್ ದಾಖಲೆಯನ್ನು ಸರಿಗಟ್ಟಿದರು. ಮಂಧಾನ ಏಕದಿನ ಕ್ರಿಕೆಟ್‌ವೊಂದರಲ್ಲೇ 14 ಶತಕಗಳನ್ನು ಗಳಿಸಿದ್ದಾರೆ. ಲ್ಯಾನ್ನಿಂಗ್ 15 ಶತಕ ಸಿಡಿಸಿದ್ದಾರೆ.
ಪ್ರತಿಕಾ ರಾವಲ್ ಜೊತೆ ಇನಿಂಗ್ಸ್ ಆರಂಭಿಸಿದ ಮಂಧಾನ ಮೊದಲ ವಿಕೆಟ್‌ಗೆ 212 ರನ್ ಜೊತೆಯಾಟ ನಡೆಸಿ ಭದ್ರ ಬುನಾದಿ ಹಾಕಿಕೊಟ್ಟರು. ಪ್ರತಿಕಾ ರಾವಲ್(122 ರನ್, 134 ಎಸೆತ)ಕೂಡ ವಿಶ್ವಕಪ್‌ನಲ್ಲಿ ತನ್ನ ಮೊದಲ ಶತಕ ಗಳಿಸಿದರು. ಮಳೆಯಿಂದಾಗಿ ಪಂದ್ಯ ನಿಂತಾಗ ಭಾರತ ತಂಡವು 48 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 329 ರನ್ ಗಳಿಸಿತು.




