ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ ನ(ಐಪಿಎಲ್)ಕೋಲ್ಕತಾ ನೈಟ್ ರೈಡರ್ಸ್ ತಂಡದ ಪ್ರಧಾನ ಕೋಚ್ ಆಗಿ ಅಭಿಷೇಕ್ ನಾಯರ್ ನೇಮಕಗೊಳ್ಳಲು ಸಜ್ಜಾಗಿದ್ದಾರೆ.
ಭಾರತದ ಮಾಜಿ ಆಟಗಾರ ಹಾಗೂ ರಾಷ್ಟ್ರೀಯ ತಂಡದ ಸಹಾಯಕ ಕೋಚ್ ಆಗಿದ್ದ ನಾಯರ್ ದೀರ್ಘ ಸಮಯದಿಂದ ಕೆಕೆಆರ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಚಂದ್ರಕಾಂತ್ ಪಂಡಿತ್ ಮುಖ್ಯ ಕೋಚ್ ಹುದ್ದೆಯನ್ನು ತೊರೆದಿರುವ ಹಿನ್ನೆಲೆಯಲ್ಲಿ ನಾಯರ್ ಈ ಹುದ್ದೆಯನ್ನು ಅಲಂಕರಿಸುವ ಸಾಧ್ಯತೆಯಿದೆ.
ನಾಯರ್ ಕಳೆದ ವಾರ ತನ್ನ ನಿರ್ಧಾರವನ್ನು ತಿಳಿಸಿದ್ದು, ಅಧಿಕೃತ ಪ್ರಕಟನೆಯು ಮುಂದಿನ ವಾರ ಹೊರಬೀಳಲಿದೆ.
2024ರಲ್ಲಿ ಐಪಿಎಲ್ ಪ್ರಶಸ್ತಿಯನ್ನು ಜಯಿಸಿದ ನಂತರ ಕೆಕೆಆರ್ ತಂಡವು ಕಳೆದ ಋತುವಿನಲ್ಲಿ ನೀರಸ ಪ್ರದರ್ಶನ ನೀಡಿದ್ದು, ಅಜಿಂಕ್ಯ ರಹಾನೆ ನಾಯಕತ್ವದಲ್ಲಿ ಪ್ಲೇ ಆಫ್ ಗೆ ತೇರ್ಗಡೆಯಾಗುವಲ್ಲಿ ವಿಫಲವಾಗಿತ್ತು. ನಾಯರ್ ಅವರು ಐಪಿಎಲ್ ಮಧ್ಯೆ ತಂಡವನ್ನು ಸೇರಿದ್ದರೂ ಕೆಕೆಆರ್ ಪ್ರದರ್ಶನದಲ್ಲಿ ಸುಧಾರಣೆಯಾಗಿರಲಿಲ್ಲ.
ಕಳೆದ ಕೆಲವು ವರ್ಷಗಳಲ್ಲಿ ನಾಯರ್ ಅವರು ರೋಹಿತ್ ಶರ್ಮಾ ಹಾಗೂ ಶ್ರೇಯಸ್ ಅಯ್ಯರ್ ಅವರಂತಹ ಪ್ರಮುಖರೊಂದಿಗೆ ಕೆಲಸ ಮಾಡಿದ್ದಾರೆ. ಮಹಿಳೆಯರ ಪ್ರೀಮಿಯರ್ ಲೀಗ್ ನಲ್ಲಿ ಯುಪಿ ವಾರಿಯರ್ಸ್ ತಂಡದ ಮುಖ್ಯ ಕೋಚ್ ಆಗಿದ್ದಾರೆ.

