ಪ್ರಯಾಗರಾಜ್: ದೇಶದಲ್ಲಿ ಕ್ರೈಸ್ತ ಧರ್ಮವನ್ನು ರಹಸ್ಯವಾಗಿ ಪಾಲಿಸುವವರ ಬಗ್ಗೆ ಆತಂಕ ವ್ಯಕ್ತಪಡಿಸಿರುವ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ), ಮತಾಂತರವಾದವರು ಮೀಸಲಾತಿ ಸವಲತ್ತುಗಳಿಗಾಗಿ ತಮ್ಮ ಮೂಲ ದಾಖಲೆಗಳನ್ನು ಬದಲಿಸಿಕೊಳ್ಳದೇ ಹಿಂದುಗಳಾಗಿಯೇ ಉಳಿದಿದ್ದಾರೆ ಎಂದು ಆರೋಪಿಸಿದೆ.
ಭಾನುವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಎಚ್‌ಪಿ ಪ್ರಧಾನ ಕಾರ್ಯದರ್ಶಿ ಮಿಲಿಂದ್ ಪರಾಂಡೆ, 'ಕೆಲವರು ಕ್ರೈಸ್ತ ಧರ್ಮವನ್ನು ನಂಬಿ, ಆಚರಣೆ ಮಾಡುತ್ತಿದ್ದಾರೆ. ಅವರು ಮತಾಂತರವಾಗಿದ್ದಾರೆ ಎಂದು ಸರ್ಕಾರಕ್ಕಾಗಲಿ, ಸಮಾಜಕ್ಕಾಗಲಿ ಗೊತ್ತಾಗುವುದೇ ಇಲ್ಲ. ಚರ್ಚ್‌ಗಳಿಗೆ ಮಾತ್ರ ಆ ವ್ಯಕ್ತಿಗಳ ನಿಜವಾದ ಧರ್ಮಾಚರಣೆ ಗೊತ್ತಿರುತ್ತದೆ' ಎಂದರು.
'ಮತಾಂತರಗೊಂಡವರ ಹೆಸರು ಬದಲಿಸದೇ ಚರ್ಚ್‌ಗಳು ತಂತ್ರಗಾರಿಕೆ ಅನುಸರಿಸುತ್ತಿವೆ. ಹೀಗಾಗಿ ಮತಾಂತರ ಗೋಪ್ಯವಾಗಿ ಉಳಿಯುತ್ತಿದೆ. ಚರ್ಚ್‌ಗಳೂ ಮತಾಂತರವನ್ನು ಒಪ್ಪಿಕೊಳ್ಳುತ್ತಿಲ್ಲ. ಇದೇ ಕಾರಣಕ್ಕೆ ಕ್ರೈಸ್ತರ ಜನಸಂಖ್ಯೆಯಲ್ಲಿ ಬದಲಾವಣೆ ಕಾಣುತ್ತಿಲ್ಲ' ಎಂದು ಮಿಲಿಂದ್ ಆರೋಪಿಸಿದರು.
'ಕೆಲವು ಹಳ್ಳಿಗಳಲ್ಲಿ ಸಾಕಷ್ಟು ಚರ್ಚ್‌ಗಳಿರುತ್ತವೆ. ಆದರೆ ಮತದಾರರ ಪಟ್ಟಿ ಪರಿಶೀಲಿಸಿದಾಗ ಆ ಹಳ್ಳಿಗಳಲ್ಲಿ ಕ್ರೈಸ್ತರೇ ಇಲ್ಲ ಎಂದು ತೋರಿಸುತ್ತದೆ. ಕ್ರೈಸ್ತರೇ ಇಲ್ಲ ಎನ್ನುವುದಾದರೆ ಅಲ್ಲಿ ಚರ್ಚ್‌ಗಳನ್ನೇಕೆ ಸ್ಥಾಪಿಸಿದ್ದಾರೆ. ಅವುಗಳ ಉದ್ದೇಶ ಮತಾಂತರ ಮಾಡುವುದು. ಭಾರತದಲ್ಲಿ ಹಿಂದೂಗಳನ್ನು ದುರ್ಬಲಗೊಳಿಸಲು ಸ್ಥಳೀಯ ಹಾಗೂ ವಿದೇಶಿ ಪ್ರಯತ್ನ ನಡೆದಿದೆ' ಎಂದು ಮಿಲಿಂದ್ ಆರೋಪಿಸಿದರು.




