ಜೆರುಸಲೆಂ: ಗಾಝಾದಲ್ಲಿ ರಾತ್ರೋರಾತ್ರಿ ಇಸ್ರೇಲ್ ನಡೆಸಿದ ವಾಯುದಾಳಿಯಲ್ಲಿ 24 ಮಕ್ಕಳು ಸೇರಿದಂತೆ ಕನಿಷ್ಠ 63 ಫೆಲೆಸ್ತೀನಿಯನ್ನರು ಮೃತಪಟ್ಟಿದ್ದಾರೆ ಎಂದು ವೈದ್ಯಕೀಯ ಮೂಲಗಳು ದೃಢಪಡಿಸಿವೆ ಎಂದು Aljazeera ವರದಿ ಮಾಡಿದೆ.
ಅಮೆರಿಕದ ಮಧ್ಯಸ್ಥಿಕೆಯಲ್ಲಿ ಜಾರಿಯಲ್ಲಿದ್ದ ಕದನ ವಿರಾಮವನ್ನು ಉಲ್ಲಂಘಿಸಿರುವ ಈ ದಾಳಿಯಿಂದ ಅಂತರರಾಷ್ಟ್ರೀಯ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.
ದಕ್ಷಿಣ ಗಾಝಾದ ರಫಾದಲ್ಲಿ ನಡೆದ ಗುಂಡಿನ ದಾಳಿಯ ಬಳಿಕ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು "ಪ್ರಬಲ ದಾಳಿಗಳಿಗೆ" ಆದೇಶಿಸಿದ ಕೆಲವೇ ಗಂಟೆಗಳಲ್ಲಿ ಈ ಹತ್ಯಾಕಾಂಡ ನಡೆದಿದೆ. ಇಸ್ರೇಲ್ ಸೇನೆ ತನ್ನ ಸೈನಿಕನೊಬ್ಬ ಮೃತಪಟ್ಟಿರುವುದಾಗಿ ಘೋಷಿಸಿದೆ.
2023ರ ಅಕ್ಟೋಬರ್‌ನಿಂದ ಆರಂಭವಾದ ಯುದ್ಧದಿಂದ ಇಂದಿನವರೆಗೆ ಗಾಝಾದಲ್ಲಿ 68,500ಕ್ಕೂ ಹೆಚ್ಚು ಮಂದಿ ಫೆಲೆಸ್ತೀನಿಯನ್ನರು ಮೃತಪಟ್ಟು, 1.7 ಲಕ್ಷಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಗಾಝಾ ನಗರದ ದಕ್ಷಿಣ ಭಾಗದಲ್ಲಿನ ವಸತಿ ಕಟ್ಟಡಗಳ ಮೇಲೆ ನಡೆದ ವಾಯುದಾಳಿಯಿಂದ ಅನೇಕ ಮನೆಗಳು ನೆಲಸಮವಾಗಿವೆ. ಸ್ಥಳೀಯರು ಅವಶೇಷಗಳಡಿ ಸಿಲುಕಿರುವವರನ್ನು ರಕ್ಷಿಸಲು ಹರಸಾಹಸ ಪಡುತ್ತಿದ್ದಾರೆ ಎಂದು ವರದಿಯಾಗಿದೆ.
ವಿವಾದಾತ್ಮಕ ಹೇಳಿಕೆ ನೀಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್
ಜಪಾನ್‌ನಿಂದ ದಕ್ಷಿಣ ಕೊರಿಯಾಕ್ಕೆ ಪ್ರಯಾಣಿಸುತ್ತಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಏರ್ ಫೋರ್ಸ್ ಒನ್ ವಿಮಾನದಲ್ಲಿ ವರದಿಗಾರರೊಂದಿಗೆ ಮಾತನಾಡುತ್ತಾ, "ಇಸ್ರೇಲಿ ಸೈನಿಕನೊಬ್ಬನನ್ನು ಕೊಂದಿದ್ದಾರೆ, ಆದ್ದರಿಂದ ಇಸ್ರೇಲ್ ಪ್ರತಿದಾಳಿ ನಡೆಸುವುದು ಸಹಜ. ಇಸ್ರೇಲ್ ಗೆ ದಾಳಿ ನಡೆಸುವ ಹಕ್ಕಿದೆ" ಎಂದು ಹೇಳಿದರು.
ಇದರಿಂದ ಕದನ ವಿರಾಮಕ್ಕೆ "ಯಾವುದೇ ಅಪಾಯವಿಲ್ಲ" ಎಂದು ಸ್ಪಷ್ಟಪಡಿಸಿದ ಅವರು, "ಹಮಾಸ್ ಸರಿಯಾದ ನಡವಳಿಕೆ ತೋರಬೇಕು. ಅವರು ಒಳ್ಳೆಯವರಾಗಿದ್ದರೆ ಶಾಂತಿ ಇರುತ್ತದೆ; ಇಲ್ಲದಿದ್ದರೆ ಅವರಿಗೆ ಅಂತ್ಯ," ಎಂದು ಟ್ರಂಪ್ ಹೇಳಿದ್ದಾರೆ.
ಹಮಾಸ್ ಇಸ್ರೇಲಿ ಪಡೆಗಳ ಮೇಲಿನ ದಾಳಿಯನ್ನು ನಿರಾಕರಿಸಿದ್ದು, "ನಾವು ಕದನ ವಿರಾಮ ಒಪ್ಪಂದಕ್ಕೆ ಬದ್ಧರಾಗಿದ್ದೇವೆ," ಎಂದು ಪ್ರಕಟಣೆ ನೀಡಿದೆ.




