ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಗೂ ಮುನ್ನ, ವಿರೋಧ ಪಕ್ಷಗಳ ಮೈತ್ರಿಕೂಟ ಮಹಾಘಟಬಂಧನ್ ಮಂಗಳವಾರ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಪ್ರತಿ ಕುಟುಂಬಕ್ಕೆ ತಲಾ ಒಂದು ಸರಕಾರಿ ಉದ್ಯೋಗ, ಪ್ರತಿ ಮಹಿಳೆಗೆ ಮಾಸಿಕ ತಲಾ 2,500 ರೂ. ಹಾಗೂ ಪ್ರತಿ ಮನೆಗೆ ಮಾಸಿಕ ತಲಾ 200 ಯೂನಿಟ್ ಉಚಿತ ಗೃಹೋಪಯೋಗಿ ವಿದ್ಯುತ್ ನೀಡಲಾಗುವುದು ಎಂದು ಆಶ್ವಾಸನೆ ನೀಡಿದೆ.
'ತೇಜಸ್ವಿಯ ಮಹಾ ಶಪಥ' ಎಂಬ ಹೆಸರಿನಲ್ಲಿ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿರುವ ಮಹಾಘಟಬಂಧನ್ ಮೈತ್ರಿಕೂಟ, ಉದ್ಯೋಗದತ್ತ ಗಮನ, ಕಲ್ಯಾಣ ಕಾರ್ಯಕ್ರಮಗಳು ಹಾಗೂ ಆಡಳಿತದ ಸುಧಾರಣೆಯಂಥ ವೈವಿದ್ಯಮಯ ಕಾರ್ಯಸೂಚಿಗೆ ಒತ್ತು ನೀಡಿದೆ.
ಮಹಾಘಟಬಂಧನ್ ಪ್ರಣಾಳಿಕೆಯ ಮುಖಪುಟದಲ್ಲಿ ಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್ ಅವರ ಭಾವಚಿತ್ರವನ್ನು ಪ್ರಮುಖವಾಗಿ ಮುದ್ರಿಸಲಾಗಿದೆ.
ಚುನಾವಣಾ ಪ್ರಣಾಳಿಕೆಯಲ್ಲಿ, "ಸಂಪೂರ್ಣ ಬಿಹಾರಕ್ಕೆ ಸಂಪೂರ್ಣ ಪರಿವರ್ತನೆ -ಇದು ತೇಜಸ್ವಿಯ ಪ್ರತಿಜ್ಞೆ, ತೇಜಸ್ವಿಯ ಶಪಥ" ಎಂಬ ಘೋಷವಾಕ್ಯವನ್ನೂ ಮುದ್ರಿಸಿದೆ.




