HEALTH TIPS

ಮಧ್ಯಪ್ರದೇಶ| 90 ಡಿಗ್ರಿ ರೈಲ್ವೆ ಮೇಲ್ಸೇತುವೆ ತಿರುವಿನ ವಿವಾದದ ನಂತರ ಈಗ ರಸ್ತೆಯ ಮಧ್ಯದಲ್ಲೇ ಕೈಪಂಪ್!

ಭೋಪಾಲ್: ಮಧ್ಯಪ್ರದೇಶದ ಸಿಧಿ ಜಿಲ್ಲೆಯ ಡೋಲ್ ಕೊಥಾರ್ ಹಳ್ಳಿಯಲ್ಲಿ ಹೊಸದಾಗಿ ನಿರ್ಮಿಸಲಾದ ರಸ್ತೆಯ ಮಧ್ಯದಲ್ಲೇ ಕೈಪಂಪ್ ಉಳಿದಿರುವ ಘಟನೆ ಬೆಳಕಿಗೆ ಬಂದಿದೆ ಎಂದು deccanchronicle.com ವರದಿ ಮಾಡಿದೆ.

ಇದರ ವೀಡಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಜನರು ಇದನ್ನು "ರಸ್ತೆ ಕೈಪಂಪ್" ಎಂದು ವ್ಯಂಗ್ಯವಾಡಿದ್ದಾರೆ.

ಪ್ರಧಾನ ಮಂತ್ರಿ ಜನ್ಮನ್ ಯೋಜನೆಯಡಿ ಅಳವಡಿಸಲಾದ ಈ ಕೈಪಂಪ್ ರಸ್ತೆ ನಿರ್ಮಾಣಕ್ಕೂ ಮುನ್ನ ಅಸ್ತಿತ್ವದಲ್ಲಿತ್ತು. ಆದರೆ ರಸ್ತೆ ನಿರ್ಮಿಸುವಾಗ ಅಧಿಕಾರಿಗಳು ಕೈಪಂಪ್ ಸ್ಥಳಾಂತರಿಸದೆ ಅದರ ಸುತ್ತಲೇ ರಸ್ತೆ ಮಾಡಿರುವುದು ಆಡಳಿತದ ನಿರ್ಲಕ್ಷ್ಯವನ್ನು ಬಹಿರಂಗಪಡಿಸಿದೆ.

ವೈರಲ್ ವೀಡಿಯೊದಲ್ಲಿ ಬೈಗಾ ಬುಡಕಟ್ಟು ಸಮುದಾಯದ ಗ್ರಾಮಸ್ಥರು ರಸ್ತೆ ಮಧ್ಯದಲ್ಲಿರುವ ಕೈಪಂಪ್‌ನಿಂದ ನೀರು ತೆಗೆದುಕೊಳ್ಳುತ್ತಿರುವುದು ಸೆರೆಯಾಗಿದೆ. ಕೈಪಂಪ್ ರಸ್ತೆ ಮೇಲ್ಮೈಯಿಂದ ಮೂರು ಅಡಿ ಕೆಳಗಿದ್ದು, ಅದರ ಒಂದು ಅಡಿ ಭಾಗ ರಸ್ತೆ ಮೇಲ್ಮೈಗಿಂತ ಮೇಲಿನ ಮಟ್ಟದಲ್ಲಿದೆ. ಕೈಪಂಪ್ ಸುತ್ತಲೂ ಸುಮಾರು ಎರಡು ಅಡಿ ಎತ್ತರದ ಸಿಮೆಂಟ್ ಕಂಬಗಳನ್ನು ಬೇಲಿಯಂತೆ ನಿರ್ಮಿಸಲಾಗಿದೆ.

"ರಸ್ತೆ ಕಾಮಗಾರಿಯ ವೇಳೆ ಕೈಪಂಪ್ ಸ್ಥಳಾಂತರಿಸಲು ಹಲವು ಬಾರಿ ಮನವಿ ಮಾಡಿದರೂ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ", ಎಂದು ಗ್ರಾಮಸ್ಥರು ದೂರಿದ್ದಾರೆ.

"ಕೈಪಂಪ್ ಸ್ಥಳಾಂತರಿಸುವ ಅಧಿಕಾರ ಪಂಚಾಯತಿಗೆ ಇಲ್ಲದ ಕಾರಣ, ಕಾಮಗಾರಿಯ ವೇಳೆ ಅದನ್ನು ಸ್ಥಳಾಂತರಿಸಲು ಸಾಧ್ಯವಾಗಲಿಲ್ಲ," ಎಂದು ಸ್ಥಳೀಯ ಪಂಚಾಯತ್ ಕಾರ್ಯದರ್ಶಿ ಮೋತಿಲಾಲ್ ಸಾಕೇತ್ ಪ್ರತಿಕ್ರಿಯೆ ನೀಡಿದರು.

"ಈ ವೀಡಿಯೊ ನಮ್ಮ ಗಮನಕ್ಕೆ ಬಂದಿದೆ. ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಲು ತನಿಖೆಗೆ ಆದೇಶಿಸಲಾಗಿದೆ", ಸ್ಥಳೀಯ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ (SDM) ರಾಕೇಶ್ ಶುಕ್ಲಾ ಹೇಳಿದ್ದಾರೆ.

ಡೋಲ್ ಕೊಥಾರ್ ಹಳ್ಳಿಯಲ್ಲಿ ಬೈಗಾ ಬುಡಕಟ್ಟು ಜನಾಂಗದ ಹತ್ತು ಕುಟುಂಬಗಳು ವಾಸವಾಗಿದ್ದು, ಈ ಕೈಪಂಪ್‌ ಅವರಿಗೆ ಕುಡಿಯುವ ನೀರಿನ ಏಕೈಕ ಮೂಲವಾಗಿದೆ.

ಕೆಲವು ತಿಂಗಳ ಹಿಂದಷ್ಟೇ ಭೋಪಾಲ್‌ನ ಐಶ್‌ಬಾಗ್ ಪ್ರದೇಶದಲ್ಲಿ 90 ಡಿಗ್ರಿ ತಿರುವಿನ ರೈಲ್ವೆ ಮೇಲ್ಸೇತುವೆ ವಿನ್ಯಾಸ ವಿವಾದ ರಾಜ್ಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿತ್ತು. ಆ ವೇಳೆ ಮುಖ್ಯಮಂತ್ರಿ ಮೋಹನ್ ಯಾದವ್ ಅವರು "ದೋಷಪೂರಿತ ವಿನ್ಯಾಸ ಸರಿಪಡಿಸಿದ ಬಳಿಕವೇ ಮೇಲ್ಸೇತುವೆ ಉದ್ಘಾಟನೆ" ಮಾಡುವುದಾಗಿ ಘೋಷಿಸಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries