ಕಾಸರಗೋಡು: ಜಿಲ್ಲೆಯ ಕಾಞಂಗಾಡ್ ನಿವಾಸಿ ಜುವಾನಾ ಅಬ್ದುಲ್ಲಾ ಅವರು ವಿವಾಹವಾದ 25 ವರ್ಷಗಳ ಬಳಿಕ ಮತ್ತೆ ತಮ್ಮ ವಿದ್ಯಾಭ್ಯಾಸ ಮುಂದುವರಿಸಲು ತೀರ್ಮಾನಿಸಿದ್ದಾರೆ. NEET ಪರೀಕ್ಷೆಯನ್ನು ಮೊದಲ ಪ್ರಯತ್ನದಲ್ಲೇ ಉತ್ತೀರ್ಣರಾಗಿ ಈಗ ಬ್ಯಾಚ್ಯುಲರ್ ಆಫ್ ಡೆಂಟಲ್ ಸರ್ಜರಿ (ಬಿಡಿಎಸ್) ಕೋರ್ಸ್‌ಗೆ ಸೇರಿದ್ದಾರೆ.
2000ರಲ್ಲಿ ಜುವಾನಾ ಅವರಿಗೆ ವಿವಾಹವಾಗಿತ್ತು. ಈ ವೇಳೆ ಅವರು ತಮ್ಮ ಮನೆ ಮಾತ್ರವಲ್ಲ pharmacology ಸ್ನಾತಕೋತ್ತರ ಶಿಕ್ಷಣವನ್ನೂ ತೊರೆದಿದ್ದರು.
ಜುವಾನಾ ನೀಟ್ ಪರೀಕ್ಷೆ ಬರೆಯಲು ನಿರ್ಧರಿಸಿದ್ದು ಕಾಕತಾಳೀಯವಲ್ಲ. ಅವರದು ವೈದ್ಯರ ಕುಟುಂಬ. ಅವರ ಪತಿ ಕೆ ಪಿ ಅಬ್ದುಲ್ಲಾ ಕಾಞಂಗಾಡ್ ಸರಕಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಇಎನ್‌ಟಿ ತಜ್ಞರಾಗಿದ್ದಾರೆ. ಅವರ ಹಿರಿಯ ಪುತ್ರಿ ಮರಿಯಮ್ ಆಫ್ರಿನ್ ಅಬ್ದುಲ್ಲಾ ಎಂಬಿಬಿಎಸ್ ಪೂರ್ಣಗೊಳಿಸಿದ್ದಾರೆ. ಅವರ ಪುತ್ರರಾದ ಸಾಲಿಹ್ ಅಬ್ದುರ್ರಜಾಕ್ ಮತ್ತು ಸಲ್ಮಾನ್ ಅಬ್ದುಲ್ ಖಾದಿರ್ ವೈದ್ಯಕೀಯ ವಿದ್ಯಾರ್ಥಿಗಳಾಗಿದ್ದಾರೆ. ಕಿರಿಯ ಮಗಳು ಅಝೀಮಾ ಆಸಿಯಾ 12ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
2022ರಲ್ಲಿ ನ್ಯಾಷನಲ್ ಮೆಡಿಕಲ್ ಕಮಿಷನ್(NMC) NEET ಪರೀಕ್ಷೆಗಿದ್ದ 25 ವರ್ಷ ವಯಸ್ಸಿನ ಮಿತಿಯನ್ನು ತೆಗೆದುಹಾಕಿತು. ಇದು ಜುವಾನಾಗೆ ವರದಾನವಾಯಿತು. ಕೋವಿಡ್ ಸಮಯದಲ್ಲಿ ನನ್ನ ಮಗ ಆನ್‌ಲೈನ್ ಮೂಲಕ NEET ಕೋಚಿಂಗ್ ಪಡೆಯುತ್ತಿದ್ದ. ವಯಸ್ಸಿನ ಮಿತಿಯನ್ನು ತೆಗೆದುಹಾಕಿದ ನಂತರ ನನ್ನ ವಯಸ್ಸಿನ ಅನೇಕರು ಪರೀಕ್ಷೆಯನ್ನು ಬರೆದರು. ಆಗ ನಾನೂ ಕೂಡ ಸಿದ್ಧತೆ ಆರಂಭಿಸಿದೆ. ನನ್ನ ಪತಿ ಮತ್ತು ಮಕ್ಕಳು ನನಗೆ ಬೆಂಬಲ ನೀಡಿದರು ಎಂದು ಹೇಳಿದರು.
ಅವರು ಯಾವುದೇ ಕೋಚಿಂಗ್ ಕ್ಲಾಸ್ ಸೇರದೆ ಯೂಟ್ಯೂಬ್ ಮತ್ತು ಮಕ್ಕಳ ಸಹಾಯದಿಂದ ಓದಿ ಮೊದಲ ಪ್ರಯತ್ನದಲ್ಲೇ ಯಶಸ್ವಿಯಾಗಿದ್ದಾರೆ. ಈ ಸಾಧನೆಯಿಂದ ಅವರು ತಮ್ಮ ನಿಧನರಾದ ತಂದೆಯ ಕನಸುಗಳನ್ನು ನನಸಾಗಿಸುವತ್ತ ಹೆಜ್ಜೆಯಿಟ್ಟಿದ್ದಾರೆ.
"12 ತರಗತಿ ತೇರ್ಗಡೆ ಬಳಿಕ ನಾನು ಮೂರು ಬಾರಿ ವೈದ್ಯಕೀಯ ಪ್ರವೇಶ ಪರೀಕ್ಷೆ ಬರೆದಿದ್ದೆ. ಆದರೆ ಯಶಸ್ವಿಯಾಗಿರಲಿಲ್ಲ. ನಂತರ ಪ್ರಾಣಿಶಾಸ್ತ್ರದಲ್ಲಿ ಬಿಎಸ್ಸಿ ಪದವಿ ಪೂರ್ಣಗೊಳಿಸಿದೆ. ಮಂಗಳೂರಿನಲ್ಲಿ ಔಷಧಶಾಸ್ತ್ರದಲ್ಲಿ ಸ್ನಾತಕೋತ್ತರ ಕೋರ್ಸ್‌ಗೆ ಸೇರಿದೆ. ಆದರೆ ನನ್ನ ತಂದೆಯ ನಿಧನ ದೊಡ್ಡ ಆಘಾತವನ್ನುಂಟುಮಾಡಿತು. ಇದಾದ ತಿಂಗಳುಗಳ ನಂತರ ನಾನು ಮದುವೆಯಾಗಿ ನನ್ನ ಅಧ್ಯಯನವನ್ನು ನಿಲ್ಲಿಸಿದೆ "ಎಂದು ಅವರು ನೆನಪಿಸಿಕೊಳ್ಳುತ್ತಾರೆ..
ಈಗ ಮಕ್ಕಳು ದೊಡ್ಡವರಾಗಿದ್ದಾರೆ. ನನ್ನ ನಾಲ್ಕು ಮಕ್ಕಳು ತಮ್ಮ ಅಧ್ಯಯನದಲ್ಲಿ ಉತ್ತಮ ಸಾಧನೆ ಮಾಡುತ್ತಿರುವಾಗ ನಾನು ಯಾಕೆ ಸುಮ್ಮನೆ ಇರಬೇಕೆಂದು ನಾನು ನನ್ನನ್ನು ಕೇಳಿಕೊಂಡೆ. ಇದೀಗ ನಾನು ನನ್ನ ಮಕ್ಕಳ ವಯಸ್ಸಿನ ವಿದ್ಯಾರ್ಥಿಗಳ ಜೊತೆಗೆ ಕುಳಿತು ಓದುತ್ತೇನೆ. ನನ್ನ ವಯಸ್ಸು ಇದಕ್ಕೆ ಅಡ್ಡಿಯಾಗುವುದಿಲ್ಲ ಎಂದು ಹೇಳಿದ್ದಾರೆ.




