ಕಠ್ಮಂಡು: ಭಾರಿ ಮಳೆಯಿಂದ ನೇಪಾಳದಲ್ಲಿ ಸಂಭವಿಸಿದ ಭೂಕುಸಿತ ಮತ್ತು ಪ್ರವಾಹದ ಪರಿಣಾಮ 51 ಮಂದಿ ಮೃತಪಟ್ಟಿದ್ದಾರೆ.
ಶುಕ್ರವಾರ ರಾತ್ರಿಯಿಂದ ಪೂರ್ವ ನೇಪಾಳದ ಹಲವೆಡೆ ನಿರಂತರವಾಗಿ ಮಳೆ ಸುರಿಯುತ್ತಿದೆ. ಶನಿವಾರ ರಾತ್ರಿ ಸಂಭವಿಸಿದ ಅವಘಡಗಳಲ್ಲಿ ಕೋಶಿ ಪ್ರಾಂತ್ಯದ ಇಲಾಮ್ ಜಿಲ್ಲೆಯೊಂದರಲ್ಲೇ 37 ಮಂದಿ ಮೃತಪಟ್ಟಿದ್ದಾರೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.
ನೇಪಾಳ ಸೇನೆಯು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ಮಳೆಯ ಪ್ರಮಾಣ ಹೆಚ್ಚಳವಾಗುತ್ತಿರುವುದು ರಕ್ಷಣಾ ಕಾರ್ಯಚರಣೆಗೆ ಅಡಚಣೆ ಉಂಟಾಗುತ್ತಿದೆ ಎಂದು ಹೇಳಿದ್ದಾರೆ.
ಇನ್ನೂ ಮೂರು ದಿನಗಳ ಕಾಲ ಭಾರಿ ಮಳೆ ಬರುವ ಸಾಧ್ಯತೆಯಿದ್ದು, ನೇಪಾಳದ ಹಲವೆಡೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ರಾಜಧಾನಿ ಕಠ್ಮಂಡುವಿಗೆ ಆಗಮಿಸುವ ಮತ್ತು ತೆರಳುವ ವಾಹನಗಳನ್ನು ನಿರ್ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹವಾಮಾನ ವೈಪರಿತ್ಯದ ಕಾರಣ ತ್ರಿಭುವನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೇಶೀಯ ವಿಮಾನಯಾನವನ್ನು ಮುಂದಿನ ಆದೇಶದವರೆಗೆ ನಿಲ್ಲಿಸಲಾಗಿದೆ ಎಂದು ಹೇಳಿದ್ದಾರೆ.




