HEALTH TIPS

ಬಿಹಾರ | ಎಸ್‌ಐಆರ್‌ ಬಳಿಕ ಮತದಾರರ ಪಟ್ಟಿ 'ಶುದ್ಧೀಕರಣ' ತೃಪ್ತಿ ತಂದಿದೆ: ಸಿಇಸಿ

 ಪಟ್ನಾ: 'ವಿಶೇಷ ಸಮಗ್ರ ಪರಿಷ್ಕರಣೆ'ಯಿಂದಾಗಿ (ಎಸ್‌ಐಆರ್‌) ಬಿಹಾರದಲ್ಲಿ ಮತದಾರರ ಪಟ್ಟಿಯ 'ಶುದ್ಧೀಕರಣ'ವಾಗಿದೆ. ಮುಂಬರುವ ರಾಜ್ಯ ವಿಧಾನಸಭೆ ಚುನಾವಣೆ ವೇಳೆ ಹಲವಾರು ಹೊಸ ಉಪಕ್ರಮಗಳನ್ನು ಕೈಗೊಳ್ಳಲಾಗುವುದು ಹಾಗೂ ಇವುಗಳನ್ನು ದೇಶದಾದ್ಯಂತ ಜಾರಿಗೊಳಿಸಲಾಗುವುದು ಎಂದು ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಭಾನುವಾರ ಹೇಳಿದ್ದಾರೆ.


ಚುನಾವಣೆ ಸಿದ್ಧತೆಗಳನ್ನು ಪರಿಶೀಲಿಸಲು ಕೈಗೊಂಡಿದ್ದ ರಾಜ್ಯ ಪ್ರವಾಸ ಮುಕ್ತಾಯಗೊಳಿಸಿದ ನಂತರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು.

ನೋಂದಣಿ ಮಾಡಿಸಿದ 15 ದಿನಗಳ ಒಳಗಾಗಿ ಮತದಾರರಿಗೆ ಭಾವಚಿತ್ರವಿರುವ ಗುರುತಿನ ಚೀಟಿ (ಎಪಿಕ್) ನೀಡುವುದು ಸೇರಿದಂತೆ ಹಲವಾರು ಪ್ರಮಾಣಿತ ಕಾರ್ಯಾಚರಣೆ ವಿಧಾನಗಳನ್ನು(ಎಸ್‌ಒಪಿ) ಈ ಹೊಸ ಉಪಕ್ರಮಗಳು ಒಳಗೊಂಡಿರಲಿವೆ ಎಂದು ತಿಳಿಸಿದರು.

ಮತಗಟ್ಟೆಗಳ ಬಳಿ ಮತದಾರರು ಭಾರಿ ಸಂಖ್ಯೆಯಲ್ಲಿ ಸೇರಿ, ಉದ್ದನೆಯ ಸಾಲಿನಲ್ಲಿ ನಿಲ್ಲುವುದನ್ನು ತಪ್ಪಿಸಲು ಕ್ರಮ ಕೈಗೊಳ್ಳಲಾಗುವುದು. ಒಂದು ಮತಗಟ್ಟೆಯಲ್ಲಿ 1,200ಕ್ಕೂ ಹೆಚ್ಚು ಮತದಾರರು ಇರದಂತೆ ನೋಡಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಹೇಳಿದರು.

'ಮತದಾರರು ತಮ್ಮ ಮೊಬೈಲ್‌ನೊಂದಿಗೆ ಬಂದಿರುತ್ತಾರೆ. ಅದನ್ನು ಬಿಟ್ಟಿರಲು ಯಾರೂ ಇಚ್ಛಿಸುವುದಿಲ್ಲ. ಹೀಗಾಗಿ, ಮೊಬೈಲ್‌ ಫೋನ್‌ಗಳನ್ನು ಇರಿಸುವುದಕ್ಕಾಗಿ ವಿಶೇಷ ಕೌಂಟರ್‌ಗಳನ್ನು ಸ್ಥಾಪಿಸಲಾಗುವುದು. ಮತ ಚಲಾಯಿಸಿದ ಬಳಿಕ ಮತದಾರರು ತಮ್ಮ ಮೊಬೈಲ್‌ಗಳನ್ನು ಮರಳಿ ಪಡೆಯುವ ವ್ಯವಸ್ಥೆ ಮಾಡಲಾಗುತ್ತದೆ' ಎಂದು ವಿವರಿಸಿದರು.

'ಎಲ್ಲ ಮತಗಟ್ಟೆಗಳಲ್ಲಿ ಶೇ100ರಷ್ಟು ವೆಬ್‌ಕಾಸ್ಟಿಂಗ್‌ ವ್ಯವಸ್ಥೆ ಅಳವಡಿಸಲಾಗುವುದು. ಇವಿಎಂಗಳಲ್ಲಿ ದತ್ತಾಂಶ ತಾಳೆಯಾಗದೇ ದೂರುಗಳು ಬಂದ ವೇಳೆ, ವಿವಿಪ್ಯಾಟ್‌ ಚೀಟಿಗಳ ಪರಿಶೀಲನೆ ಕಡ್ಡಾಯಗೊಳಿಸಲಾಗುವುದು' ಎಂದರು.

ಚುನಾವಣಾ ಆಯುಕ್ತರಾದ ಸುಖಬೀರ್‌ ಸಿಂಗ್‌ ಸಂಧು ಹಾಗೂ ಡಾ.ವಿವೇಕ ಜೋಶಿ ಉಪಸ್ಥಿತರಿದ್ದರು.

ಆಧಾರ್-ಸ್ಪಷ್ಟನೆ: 'ಆಧಾರ್‌ ಕಾರ್ಡ್‌ ವ್ಯಕ್ತಿಯ ಗುರುತು ದೃಢಪಡಿಸುವ ಉದ್ದೇಶಕ್ಕಾಗಿ ಇರುವುದು. ಅದು ಜನ್ಮದಿನಾಂಕ ಅಥವಾ ವಿಳಾಸ ಇಲ್ಲವೇ ಪೌರತ್ವದ ಪುರಾವೆ ಅಲ್ಲ' ಎಂದು ಪ್ರಶ್ನೆಯೊಂದಕ್ಕೆ ಸಿಇಸಿ ಜ್ಞಾನೇಶ್‌ ಕುಮಾರ್‌ ಪ್ರತಿಕ್ರಿಯಿಸಿದರು.

ಆಯೋಗವು, ಬಿಹಾರ ವಿಧಾನಸಭೆ ಚುನಾವಣೆ ದಿನಾಂಕ ಕುರಿತು ಒಂದೆರಡು ದಿನಗಳಲ್ಲಿ ಘೋಷಣೆ ಮಾಡುವ ಸಾಧ್ಯತೆ ಇದೆ.

ಜ್ಞಾನೇಶ್‌ ಕುಮಾರ್ ಮುಖ್ಯ ಚುನಾವಣಾ ಆಯುಕ್ತಬಿಹಾರದಲ್ಲಿ ಎಸ್‌ಐಆರ್‌ ಬಳಿಕ ಮತದಾರರ ಪಟ್ಟಿ ಸಿದ್ಧಪಡಿಸುವ ವೇಳೆ ಯಾವುದೇ ತಪ್ಪು ಆಗಿಲ್ಲ. ನವೆಂಬರ್ 22ರ ಒಳಗಾಗಿ ಚುನಾವಣೆ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದುಮೋದಿ ರಾಹುಲ್‌ ಪ್ರಸ್ತಾಪಿಸಿದ್ದ ವಿಚಾರಗಳಿಗೆ ಉತ್ತರಿಸದ ಸಿಇಸಿ

ಬಿಹಾರದಲ್ಲಿ ಕೈಗೊಂಡಿದ್ದ 'ಎಸ್‌ಐಆರ್‌' ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಿಇಸಿ ಜ್ಞಾನೇಶ್‌ ಕುಮಾರ್‌ ಪ್ರಧಾನಿ ನರೇಂದ್ರ ಮೋದಿ ಪ್ರಸ್ತಾಪಿಸಿದ್ದ 'ನುಸುಳುಕೋರರು' ಹಾಗೂ 'ಮತ ಕಳವು' ಕುರಿತು ಲೋಕಸಭೆಯಲ್ಲಿ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಮಾಡಿದ್ದ ಆರೋಪಗಳಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸಲಿಲ್ಲ.

'ಪ್ರಧಾನಿ ನರೇಂದ್ರ ಮೋದಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಬಿಹಾರಕ್ಕೆ ಭೇಟಿ ನೀಡಿದಾಗಲೆಲ್ಲಾ ನುಸುಳುಕೋರರ ಕುರಿತು ಪ್ರಸ್ತಾಪಿಸುತ್ತಿದ್ದರು. ಬಿಹಾರದಲ್ಲಿ ದೊಡ್ಡ ಸಂಖ್ಯೆಯಲ್ಲಿ ನುಸುಳುಕೋರರಿದ್ದು ಅವರು ಮತ ಚಲಾಯಿಸುತ್ತಾರೆ ಎಂದು ಮೋದಿ ಹಾಗೂ ಶಾ ಹೇಳಿದ್ದಾರಲ್ಲ' ಎಂದು ಪತ್ರಕರ್ತರು ಪ್ರಶ್ನಿಸಿದರು. ಇದಕ್ಕೆ ಸಿಇಸಿ ಉತ್ತರಿಸಲಿಲ್ಲ.

'ಎಸ್‌ಐಆರ್‌ ವೇಳೆ ಎಷ್ಟು ಜನ ನುಸುಳುಕೋರರು ಪತ್ತೆಯಾಗಿದ್ದಾರೆ' ಎಂಬ ಪ್ರಶ್ನೆಗೂ ಅವರು ಉತ್ತರಿಸಲಿಲ್ಲ. 'ಮತ ಕಳವು' ಕುರಿತು ರಾಹುಲ್‌ ಗಾಂಧಿ ಮಾಡುತ್ತಿರುವ ಆರೋಪಗಳ ಕುರಿತ ಮತ್ತೊಂದು ಪ್ರಶ್ನೆಗೂ ಸಿಇಸಿ ಪ್ರತಿಕ್ರಿಯೆ ನೀಡಲಿಲ್ಲ.

ಆದರೆ 'ಮುಜಫ್ಫರಪುರದ ನಿರ್ದಿಷ್ಟ ಮತಗಟ್ಟೆಯೊಂದರ ಮತದಾರರ ಪಟ್ಟಿಯಲ್ಲಿ ಒಂದೇ ಸಮುದಾಯಕ್ಕೆ ಸೇರಿದ 100ಕ್ಕೂ ಹೆಚ್ಚು ಮತದಾರರ ಹೆಸರುಗಳನ್ನು ಸೇರ್ಪಡೆ ಮಾಡಿರುವ ಕುರಿತು ತನಿಖೆ ನಡೆಸಬೇಕು' ಎಂದು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದ ಬಿಹಾರದ ಮುಖ್ಯ ಚುನಾವಣಾ ಅಧಿಕಾರಿ ವಿನೋದ್‌ ಗುಂಜ್ಯಾಲ್ ಅವರಿಗೆ ಸೂಚಿಸಿದರು.

'ಅನೇಕ ಮತದಾರರಿಗೆ ಮನೆ ಇಲ್ಲ. ಇಂಥ ಸಂದರ್ಭಗಳಲ್ಲಿ ನೆರೆ ಮನೆಯ ಸಂಖ್ಯೆಯನ್ನು ಇಂತಹ ಮತದಾರರಿಗೆ ಹಂಚಿಕೆ ಮಾಡಲಾಗುತ್ತದೆ. ಹೀಗಾಗಿ ಒಂದು ಮನೆಯಲ್ಲಿ ಅನೇಕ ಮತದಾರರು ಕಂಡುಬರುವ ಸಾಧ್ಯತೆ ಹೆಚ್ಚು' ಎಂದು ಅವರು ಕಾಂಗ್ರೆಸ್ ಪಕ್ಷದ ನಿಯೋಗ ಎತ್ತಿದ್ದ ಆಕ್ಷೇಪಕ್ಕೆ ಪ್ರತಿಕ್ರಿಯಿಸಿದರು.

'ಮತದಾರರ ಪಟ್ಟಿಯ ಪರಿಷ್ಕರಣೆ ಕಾರ್ಯ ತೃಪ್ತಿ ತಂದಿದೆ. ಮತದಾರರ ಪಟ್ಟಿಯ 'ಶುದ್ಧೀಕರಣ' ಕಾರ್ಯದಲ್ಲಿ 90 ಸಾವಿರಕ್ಕೂ ಅಧಿಕ ಮತಗಟ್ಟೆ ಮಟ್ಟದ ಅಧಿಕಾರಿಗಳು (ಬಿಎಲ್‌ಒ) ಶ್ಲಾಘನೀಯ ಕಾರ್ಯ ಮಾಡಿದ್ದಾರೆ' ಎಂದು ಜ್ಞಾನೇಶ್‌ ಕುಮಾರ್‌ ಹೇಳಿದರು. '22 ವರ್ಷಗಳ ಬಳಿಕ ಬಿಹಾರದಲ್ಲಿ ಮತದಾರರ ಪಟ್ಟಿಯ ಪರಿಷ್ಕರಣೆ ನಡೆಸಲಾಗಿದೆ. ನೈಜ ಮತದಾರರ ಸಂಖ್ಯೆಯನ್ನು 7.89 ಕೋಟಿಯಿಂದ 7.43 ಕೋಟಿಗೆ ಇಳಿಸಲು ಇದರಿಂದ ಸಾಧ್ಯವಾಗಿದೆ' ಎಂದು ಹೇಳಿದರು. 'ತೃಪ್ತಿ ತಂದಿದೆ'

ಪ್ರಮುಖ ಅಂಶಗಳು

2 ದಿನಗಳ ಪ್ರವಾಸ ಕೈಗೊಂಡಿದ್ದ ಸಿಇಸಿ ಜ್ಞಾನೇಶ್‌ ಕುಮಾರ್.


ಚುನಾವಣೆ ಸಿದ್ಧತೆ ಕುರಿತು ಅಧಿಕಾರಿಗಳೊಂದಿಗೆ ಚರ್ಚೆ


ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಸಭೆ. ಸಲಹೆ-ಸೂಚನೆ ಆಲಿಕೆ


243 ಕ್ಷೇತ್ರಗಳ ಪೈಕಿ 38 ಪರಿಶಿಷ್ಟ ಜಾತಿ ಹಾಗೂ 2 ಕ್ಷೇತ್ರ ಪರಿಶಿಷ್ಟ ಪಂಗಡಗಳಿಗೆ ಮೀಸಲು


ಛತ್‌ ಹಬ್ಬದ ಬಳಿಕ ಚುನಾವಣೆ ನಡೆಸುವಂತೆ ಬಹುತೇಕ ರಾಜಕೀಯ ಪಕ್ಷಗಳಿಂದ ಮನವಿ









ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries