ನವದೆಹಲಿ: ದೇಶದ ವಿವಿಧ ಔಷಧ ತಯಾರಿಕಾ ಕಂಪನಿಗಳು ತಯಾರಿಸಿರುವ ಔಷಧ ಮಾದರಿಗಳನ್ನು ಕೇಂದ್ರ ಔಷಧ ಪ್ರಯೋಗಾಲಯಗಳಲ್ಲಿ ಪರೀಕ್ಷೆಗೆ ಒಳಪಡಿಸಲಾಗಿದ್ದು, ಇದರಲ್ಲಿ 52 ಮಾದರಿಗಳು 'ಪ್ರಮಾಣಿತ ಗುಣಮಟ್ಟ ಹೊಂದಿಲ್ಲ' ಎಂದು ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಯ ( ಸಿಡಿಎಸ್‌ಸಿಒ) ಸೆಪ್ಟೆಂಬರ್ ತಿಂಗಳ ವರದಿ ತಿಳಿಸಿದೆ.
ಕೇಂದ್ರ ಮಾತ್ರವಲ್ಲ, ರಾಜ್ಯಮಟ್ಟದ ಪ್ರಯೋಗಾಲಯಗಳಲ್ಲೂ ವಿವಿಧ ಔಷಧಗಳ ಗುಣಮಟ್ಟ ಪರೀಕ್ಷೆ ನಡೆದಿದ್ದು, ಅದರಲ್ಲೂ 60 ಮಾದರಿಗಳು ಕಳಪೆ ಎನ್ನವುದು ತಿಳಿದುಬಂದಿದೆ ಎಂದು ಈ ವರದಿ ಉಲ್ಲೇಖಿಸಿ ಆರೋಗ್ಯ ಸಚಿವಾಲಯದ ಮೂಲಗಳು ಹೇಳಿವೆ.
ಛತ್ತೀಸಗಢದ ಕಂಪನಿಯೊಂದು ಬೇರೊಂದು ಕಂಪನಿಯ ಹೆಸರು, ವಿಳಾಸ ಬಳಸಿಕೊಂಡು ನಕಲಿ ಔಷಧ ತಯಾರಿಸಿರುವುದು ಪರೀಕ್ಷೆಯಲ್ಲಿ ದೃಢಪಟ್ಟಿದೆ. ಕಳಪೆ ಔಷಧ ತಯಾರಿಸಿದ ಕಂಪನಿ ವಿರುದ್ಧ ಕಾನೂನು ಪ್ರಕ್ರಿಯೆ ನಡೆಯುತ್ತಿದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ.




