HEALTH TIPS

Bihar SIR: ಕೈಬಿಡಲಾದ 3.66ಲಕ್ಷ ಮತದಾರರ ವಿವರ ಸಲ್ಲಿಸಲು ಸುಪ್ರೀಂ ಕೋರ್ಟ್ ಸೂಚನೆ

ನವದೆಹಲಿ: ಬಿಹಾರದಲ್ಲಿ ಕೈಗೊಂಡ 'ವಿಶೇಷ ಸಮಗ್ರ ಪರಿಷ್ಕರಣೆ'(ಎಸ್‌ಐಆರ್‌) ಬಳಿಕ ಸಿದ್ಧಪಡಿಸಲಾದ ಅಂತಿಮ ಮತದಾರರ ಪಟ್ಟಿಯಿಂದ ತೆಗೆದು ಹಾಕಲಾದ 3.66 ಲಕ್ಷದ ಮತದಾರರ ಕುರಿತ ವಿವರಗಳನ್ನು ಸಲ್ಲಿಸುವಂತೆ ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್‌ ಮಂಗಳವಾರ ನಿರ್ದೇಶನ ನೀಡಿದೆ.

'ಮುಂದಿನ ವಿಚಾರಣೆಯನ್ನು ಅಕ್ಟೋಬರ್ 9ರಂದು ನಡೆಸಲಾಗುವುದು. ಇದರೊಳಗಾಗಿ, ತೆಗೆದು ಹಾಕಲಾದ ಮತದಾರರ ಕುರಿತು ಲಭ್ಯವಾಗುವ ಎಲ್ಲ ಮಾಹಿತಿಯನ್ನು ಸಲ್ಲಿಸಬೇಕು' ಎಂದೂ ಸೂಚಿಸಿದೆ.

ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಹಾಗೂ ಜಾಯ್‌ಮಾಲ್ಯ ಬಾಗ್ಚಿ ಅವರು ಇದ್ದ ಪೀಠವು, ಎಸ್‌ಐಆರ್‌ ಪ್ರಕ್ರಿಯೆ ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ವೇಳೆ ಈ ನಿರ್ದೇಶನ ನೀಡಿದೆ.

'ಪ್ರತಿಯೊಬ್ಬರು ಕರಡು ಮತದಾರರ ಪಟ್ಟಿ ಹೊಂದಿದ್ದಾರೆ. ಸೆಪ್ಟೆಂಬರ್ 30ರಂದು ಅಂತಿಮ ಪಟ್ಟಿಯನ್ನು ಕೂಡ ಪ್ರಕಟಿಸಲಾಗಿದೆ. ಹೀಗಾಗಿ, ತುಲನಾತ್ಮಕ ವಿಶ್ಲೇಷಣೆಯೊಂದಿಗೆ ನ್ಯಾಯಾಲಯಕ್ಕೆ ಮಾಹಿತಿ ಸಲ್ಲಿಸಬೇಕು' ಎಂದು ಪೀಠ ಹೇಳಿದೆ.

ವಿಚಾರಣೆ ವೇಳೆ,'ಪಟ್ಟಿಯಲ್ಲಿ ಸೇರ್ಪಡೆ ಮಾಡಲಾಗಿರುವ ಬಹುತೇಕ ಹೆಸರುಗಳು ಹೊಸ ಮತದಾರರವು. ಪರಿಷ್ಕರಣೆ ವೇಳೆ ಕೈಬಿಡಲಾದ ಹೆಸರುಗಳಿಗೆ ಸಂಬಂಧಿಸಿ ಮತದಾರರಿಂದ ಈ ವರೆಗೆ ಯಾವುದೇ ದೂರು ಅಥವಾ ಮೇಲ್ಮನವಿ ಸಲ್ಲಿಕೆ ಆಗಿಲ್ಲ' ಎಂದು ಆಯೋಗದ ಪರ ಹಾಜರಿದ್ದ ಹಿರಿಯ ವಕೀಲ ರಾಕೇಶ್ ದ್ವಿವೇದಿ ಅವರು ಪೀಠಕ್ಕೆ ತಿಳಿಸಿದರು.

ಆಗಸ್ಟ್‌ 1ರಂದು ಕರಡು ಮತದಾರರ ಪಟ್ಟಿ ಪ್ರಕಟ | ಸೆಪ್ಟೆಂಬರ್ 30ರಂದು ಅಂತಿಮ ಪಟ್ಟಿ ಪ್ರಕಟಿಸಿದ ಆಯೋಗ

  • 21.53 ಲಕ್ಷ ಕರಡು ಪಟ್ಟಿಯಲ್ಲಿ ಸೇರಿಸಲಾದ ಮತದಾರರ ಸಂಖ್ಯೆ

  • 3.66 ಲಕ್ಷ ಪರಿಶೀಲನೆ ಬಳಿಕ ಕೈಬಿಡಲಾದ ಮತದಾರರ ಸಂಖ್ಯೆ

  • 17.87 ಲಕ್ಷ ಮತದಾರರ ಸಂಖ್ಯೆಯಲ್ಲಾದ ಒಟ್ಟು ಹೆಚ್ಚಳ

'ಸುಪ್ರೀಂ' ಹೇಳಿದ್ದೇನು?

* ಕರಡು ಮತ್ತು ಅಂತಿಮ ಮತದಾರರ ಪಟ್ಟಿಯನ್ನು ಪರಿಶೀಲಿಸಿದಾಗ ಮತದಾರರ ಸಂಖ್ಯೆಯಲ್ಲಿ ಹೆಚ್ಚಳವಾಗಿರುವುದು ಕಂಡುಬರುತ್ತದೆ. ಗೊಂದಲ ನಿವಾರಣೆ ಉದ್ದೇಶದಿಂದ ಹೊಸದಾಗಿ ಸೇರಿಸಲಾದ ಮತದಾರರ ಗುರುತನ್ನು ಬಹಿರಂಗಪಡಿಸಬೇಕು

* ಕರಡು ಪಟ್ಟಿಯಿಂದ 65 ಲಕ್ಷ ಮತದಾರರ ಹೆಸರುಗಳನ್ನು ತೆಗೆದು ಹಾಕಲಾಗಿದೆ. ಮೃತರ ಹಾಗೂ ವಲಸೆ ಹೋದವರ ಹೆಸರುಗಳನ್ನು ಕೈಬಿಟ್ಟಿರುವುದೂ ಸರಿ ಇದೆ. ಆದರೆ ಯಾರದೋ ಒಬ್ಬ ಅರ್ಹ ಮತದಾರನ ಹೆಸರನ್ನು ನೀವು ಪಟ್ಟಿಯಿಂದ ತೆಗೆಯುತ್ತೀರಿ ಎಂದಾದಲ್ಲಿ ನಿಯಮ 21 ಹಾಗೂ ಪ್ರಮಾಣಿತ ಕಾರ್ಯಾಚರಣೆ ವಿಧಾನ(ಎಸ್‌ಒಪಿ) ಅನುಸರಿಸಬೇಕು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries