ಗ್ಯಾಸ್ ಸ್ಟವ್‌ಗಳ ಮೇಲೆ ಬಿಸಿ ಮಾಡಲಾಗುತ್ತಿದ್ದ ರಾಸಾಯನಿಕಗಳ ಕಡಾಯಿಗಳು,ಅವಶೇಷಗಳು ಸೋರಿಕೆಯಾಗುತ್ತಿದ್ದ ಪ್ಲಾಸ್ಟಿಕ್ ಕೊಳವೆಗಳು, ತುಕ್ಕು ಹಿಡಿದ ಉಪಕರಣಗಳು ಹಾಗೂ ಕೈಗವುಸು ಅಥವಾ ಮಾಸ್ಕ್ ಧರಿಸದೆ ರಾಸಾಯನಿಕ ಪದಾರ್ಥಗಳನ್ನು ಮಿಶ್ರಣಗೊಳಿಸುತ್ತಿದ್ದ ತರಬೇತಿ ಪಡೆದಿರದ ಕಾರ್ಮಿಕರು ಸೇರಿದಂತೆ ಕಂಪನಿಯ ಕರ್ಮಕಾಂಡ ಇನ್ನಿಲ್ಲದಂತೆ ಆಘಾತವನ್ನುಂಟು ಮಾಡಿತ್ತು ಎಂದು NDTV ವರದಿ ಮಾಡಿದೆ.
ಕೋಲ್ಡ್ರಿಫ್ ತಯಾರಿಕೆಯಲ್ಲಿ ಬಳಸಲಾಗಿದ್ದ ಕೈಗಾರಿಕಾ ದರ್ಜೆಯ ರಾಸಾಯನಿಕಗಳನ್ನು ನಗದು ಪಾವತಿ ಅಥವಾ ಗೂಗಲ್ ಪೇ ಮೂಲಕ ಸ್ಥಳೀಯ ಸನ್‌ರೈಸ್ ಬಯೊಟೆಕ್ ಮತ್ತು ಪಾಂಡಿಯಾ ಕೆಮಿಕಲ್ಸ್‌ನಿಂದ ಖರೀದಿಸಲಾಗಿತ್ತು ಮತ್ತು ಇದು ದಾಖಲೀಕರಣವನ್ನು ತಪ್ಪಿಸಲು ನೆರವಾಗಿತ್ತು ಎಂದು ತಮಿಳುನಾಡು ಔಷಧಿ ನಿಯಂತ್ರಣ ನಿರ್ದೇಶನಾಲಯವು ತನ್ನ ಅ.3ರ ವರದಿಯಲ್ಲಿ ಹೇಳಿದೆ.
ಕಂಪನಿಯು ಸಿರಪ್‌ನ ಪ್ರಮುಖ ಘಟಕಾಂಶವಾದ ಪ್ರೊಪಿಲೀನ್ ಗ್ಲೈಕಾಲ್‌ನ್ನು ಪ್ರಮಾಣೀಕೃತ ಔಷಧಿ ಪೂರೈಕೆದಾರರ ಬದಲು ಸ್ಥಳೀಯ ರಾಸಾಯನಿಕಗಳ ವ್ಯಾಪಾರಿಗಳು ಮತ್ತು ಪೇಂಟ್ ಇಂಡಸ್ಟ್ರಿ ವಿತರಕರಿಂದ ಖರೀದಿಸಿತ್ತು. ಮಾರಣಾಂತಿಕ ಮಾಲಿನ್ಯಕಾರಗಳಿಗಾಗಿ ಯಾವುದೇ ಪರೀಕ್ಷೆಯಿಲ್ಲದೆ ಈ ಖರೀದಿಗಳನ್ನು ಮಾಡಲಾಗಿತ್ತು.
ಡೈಎಥಿಲೀನ್ ಗ್ಲೈಕಾಲ್ ಅಥವಾ ಎಥಿಲೀನ್ ಗ್ಲೈಕಾಲ್‌ಗಳಂತಹ ಮಾಲಿನ್ಯಕಾರಕಗಳಿಗಾಗಿ ಪರೀಕ್ಷೆ ನಡೆಸದೆ ಕೈಗಾರಿಕಾ ದರ್ಜೆಯ ಪ್ರೊಪಿಲೀನ್ ಗ್ಲೈಕಾಲ್‌ನ್ನು ಕಂಪನಿಯು ಬಳಸಿತ್ತು ಎನ್ನುವುದನ್ನು ಅದಿಕಾರಿಗಳು ಪತ್ತೆ ಹಚ್ಚಿದ್ದಾರೆ. ಮೂತ್ರಪಿಂಡ, ಯಕೃತ್ತು ಮತ್ತು ನರಮಂಡಲಕ್ಕೆ ಗಂಭೀರ ಹಾನಿಯನ್ನುಂಟು ಮಾಡುವ ಡೈಎಥಿಲೀನ್ ಗ್ಲೈಕಾಲ್ ಸಾವನ್ನಪ್ಪಿದ ಮಕ್ಕಳ ಮೂತ್ರಪಿಂಡಗಳ ಬಯಾಪ್ಸಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪತ್ತೆಯಾಗಿದೆ. ಕೋಲ್ಡ್ರಿಫ್‌ನ ಮಾರಣಾಂತಿಕ ಎಸ್‌ಆರ್-13 ಬ್ಯಾಚ್‌ನಲ್ಲಿ ಶೇ.48.6ರಷ್ಟು ಭಾರೀ ಪ್ರಮಾಣದಲ್ಲಿ ಡೈಎಥಿಲೀನ್ ಕಂಡು ಬಂದಿದ್ದು,ಇದು ಅನುಮತಿಸಲಾದ ಮಿತಿಗಿಂತ 500 ಪಟ್ಟು ಹೆಚ್ಚಿದೆ.
ಕಂಪನಿಯಲ್ಲಿ ಔಷಧಿ ಜಾಗ್ರತ ವ್ಯವಸ್ಥೆ ಇರಲಿಲ್ಲ,ಅಂದರೆ ಪ್ರತಿಕೂಲ ಪ್ರತಿಕ್ರಿಯೆಗಳ ಬಗ್ಗೆ ಯಾರೂ ಗಮನ ಹರಿಸಿರಲಿಲ್ಲ ಎಂದು ವರದಿಯು ಬೆಟ್ಟು ಮಾಡಿದೆ.
ಉತ್ಪಾದನೆಯ ಮೇಲ್ವಿಚಾರಣೆಗಾಗಿ ಯಾವುದೇ ಅರ್ಹ ರಸಾಯನ ಶಾಸ್ತ್ರಜ್ಞರು ಇರಲಿಲ್ಲ,ಕಚ್ಚಾವಸ್ತುಗಳನ್ನು ಗುಣಮಟ್ಟ ಪರೀಕ್ಷೆ ಇಲ್ಲದೇ ಬಳಸಲಾಗುತ್ತಿತ್ತು. ಉತ್ಪಾದನೆಗೆ ಅಪರಿಚಿತ ಮೂಲಗಳಿಂದ ನೀರನ್ನು ಬಳಸಲಾಗುತ್ತಿತ್ತು ಮತ್ತು ಅದರ ಶುದ್ಧತೆಯನ್ನು ಪರೀಕ್ಷಿಸಲಾಗುತ್ತಿರಲಿಲ್ಲ.
ಅಧಿಕಾರಿಗಳು 1940ರ ಔಷಧಿಗಳು ಮತ್ತು ಪ್ರಸಾಧನಗಳ ಕಾಯ್ದೆಯಡಿ 39 ಗಂಭೀರ ಮತ್ತು 325 ಪ್ರಮುಖ ಉಲ್ಲಂಘನೆಗಳನ್ನು ವರದಿ ಮಾಡಿದ್ದಾರೆ.
ಮಧ್ಯಪ್ರದೇಶದ ಛಿಂದ್ವಾರಾದಲ್ಲಿ ಮಕ್ಕಳು ಸೇವಿಸಿದ್ದ ಕೋಲ್ಡ್ರಿಫ್ ಮೇ 2025ರಲ್ಲಿ ತಯಾರಾಗಿತ್ತು ಮತ್ತು ಎಪ್ರಿಲ್ 2027ರಲ್ಲಿ ಅದರ ಅವಧಿ ಮುಕ್ತಾಯಗೊಳ್ಳಲಿತ್ತು. ಯಾವುದೇ ಎಚ್ಚರಿಕೆಯ ಗಂಟೆ ಮೊಳಗುವ ಮುನ್ನ ಮಾರುಕಟ್ಟೆಯಲ್ಲಿ ಅದು ಮುಕ್ತವಾಗಿ ಮಾರಾಟವಾಗುತ್ತಿತ್ತು ಎಂದು ವರದಿಯು ತಿಳಿಸಿದೆ.




