ಜಿನೀವಾ: ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿ ಸಭೆಯಲ್ಲಿ ಪಾಕಿಸ್ತಾನವನ್ನು ಭಾರತ ಮತ್ತೊಮ್ಮೆ ಕಟುವಾಗಿ ಟೀಕಿಸಿದೆ.
'ಜಗತ್ತಿನಲ್ಲಿಯೇ ಮಾನವ ಹಕ್ಕುಗಳು ವಿಪರೀತವಾಗಿ ದಮನವಾಗಿರುವ ದೇಶವೊಂದರಲ್ಲಿ, ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ಸರ್ಕಾರಿ ಪ್ರಾಯೋಜಿತ ಕಿರುಕುಳ, ತಾರತಮ್ಯ ನಡೆಯುತ್ತಿದೆ.
ಈ ಸಮಸ್ಯೆಗಳನ್ನು ನಿವಾರಿಸುವ ಬದಲು ಆ ರಾಷ್ಟ್ರ ಇತರ ದೇಶಗಳಿಗೆ ಉಪದೇಶ ಮಾಡುತ್ತಿದೆ' ಎಂದು ಪರೋಕ್ಷವಾಗಿ ಪಾಕಿಸ್ತಾನವನ್ನು ಭಾರತ ಛೇಡಿಸಿದೆ.
ಜಿನೀವಾದಲ್ಲಿ ನಡೆಯುತ್ತಿರುವ ವಿಶ್ವಸಂಸ್ಥೆ ಮಾನವ ಹಕ್ಕುಗಳ ಸಮಿತಿಯ 60ನೇ ಅಧಿವೇಶನದಲ್ಲಿ ಮಾತನಾಡಿದ ಭಾರತದ ಪ್ರತಿನಿಧಿ ಕೆ.ಎಸ್ ಮೊಹಮ್ಮದ್ ಹುಸೇನ್, 'ಭಾರತದ ವಿರುದ್ಧ ಕಪೋಕಲ್ಪಿತ ಆರೋಪಗಳನ್ನು ಮಾಡುವ ಮೂಲಕ ಒಂದು ದೇಶ ತನ್ನ ಬೂಟಾಟಿಕೆಯನ್ನು ಪ್ರದರ್ಶಿಸಿದೆ' ಎಂದು ಪಾಕಿಸ್ತಾನದ ಹೆಸರು ಹೆಸರೇಳದೆ ವಾಗ್ದಾಳಿ ನಡೆಸಿದ್ದಾರೆ.
ಇದಕ್ಕೂ ಮೊದಲು ಪಾಕಿಸ್ತಾನವು ಕಾಶ್ಮೀರ ವಿಷಯ ಪ್ರಸ್ತಾಪಿಸಿತ್ತು.




