ಲಖನೌ: 'ಪಾಕಿಸ್ತಾನದ ಪ್ರತಿ ಮೂಲೆಯನ್ನೂ ಭಾರತದ ಬ್ರಹ್ಮೋಸ್ ಕ್ಷಿಪಣಿ ತಲುಪುವ ಸಾಮರ್ಥ್ಯವಿದೆ. ಇತ್ತೀಚೆಗೆ ನಡೆದ ಆಪರೇಷನ್ ಸಿಂಧೂರ ಕಾರ್ಯಾಚರಣೆಯು ಕೇವಲ ಒಂದು ಟ್ರೇಲರ್ ಅಷ್ಟೇ' ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಶನಿವಾರ ಹೇಳಿದ್ದಾರೆ.
ಉತ್ತರ ಪ್ರದೇಶದ ಲಖನೌನಲ್ಲಿ ಸ್ಥಾಪನೆಗೊಂಡಿರುವ ಬ್ರಹ್ಮೋಸ್ ಏರೋಸ್ಪೇಸ್‌ನಲ್ಲಿ ತಯಾರಾದ ಕ್ಷಿಪಣಿಯ ಮೊದಲ ತಂಡಕ್ಕೆ ಹಸಿರು ನಿಶಾನೆ ತೋರಿ ಅವರು ಮಾತನಾಡಿದರು.
'ಭಾರತದ ಸಶಸ್ತ್ರ ದಳದ ಪ್ರಮುಖ ಆಧಾರಸ್ತಂಭವೇ ಬ್ರಹ್ಮೋಸ್ ಕ್ಷಿಪಣಿ. ಕನಸನ್ನು ನನಸಾಗಿಸುವ ದೇಶದ ಜನರ ನಂಬಿಕೆಯನ್ನು ಇದು ಇನ್ನಷ್ಟು ಬಲಪಡಿಸಿದೆ' ಎಂದಿದ್ದಾರೆ.
'ಈ ಐತಿಹಾಸಿಕ ಕ್ಷಣವು ಉತ್ತರ ಪ್ರದೇಶದ ರಕ್ಷಣಾ ಕ್ಷೇತ್ರದ ಕೈಗಾರಿಕಾ ಕಾರಿಡಾರ್‌ನ ಪ್ರಗತಿಯ ಆರಂಭವೂ ಹೌದು. ಇದರ ಮೂಲಕ ಆತ್ಮನಿರ್ಭರ ಭಾರತದ ಮೂಲಕ ರಕ್ಷಣಾ ಸಾಮಗ್ರಿಗಳ ತಯಾರಿಕೆಗೆ ಹೊಸ ದಿಸೆ ಸಿಗಲಿದೆ' ಎಂಬ ವಿಶ್ವಾಸ ವ್ಯಕ್ತಪಡಿಸಿದೆ.
ಲಖನೌನ ಸರೋಜಿನಿ ನಗರದಲ್ಲಿ ಬ್ರಹ್ಮೋಸ್ ಏರೋಸ್ಪೇಸ್‌ನ ಕ್ಷಿಪಣಿ ತಯಾರಿಕೆ ಮತ್ತು ಪರೀಕ್ಷಾ ಕೇಂದ್ರವಿದೆ. ಈ ಘಟಕವು ಮೇ 11ರಂದು ಉದ್ಘಾಟನೆಯಾಗಿತ್ತು. ಇಲ್ಲಿ ತಯಾರಾಗುವ ಕ್ಷಿಪಣಿಗಳ ಯಶಸ್ವಿ ಪರೀಕ್ಷೆಗಳ ನಂತರ, ಭಾರತೀಯ ಸೇನೆಯಲ್ಲಿ ಅದನ್ನು ನಿಯೋಜಿಸಲಾಗುತ್ತದೆ.
ಕಾರ್ಯಕ್ರಮದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್, ಸಚಿವ ನಂದ ಗೋಪಾಲ ಗುಪ್ತಾ ನಂದಿ ಇದ್ದರು.

