HEALTH TIPS

ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಯಲ್ಲಿ ಹಿಂದುಳಿದವರ ಮೀಸಲಾತಿಗೆ HC ತಡೆ: ಪ್ರತಿಭಟನೆ

ಹೈದರಾಬಾದ್: ತೆಲಂಗಾಣ ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಹಿಂದುಳಿದ ವರ್ಗದವರಿಗೆ ನೀಡಲಾಗಿದ್ದ ಶೇ 42ರಷ್ಟು ಮೀಸಲಾತಿಗೆ ಹೈಕೋರ್ಟ್ ತಡೆ ನೀಡಿದ ಬೆನ್ನಲ್ಲೇ ಹಿಂದುಳಿದ ವರ್ಗಗಳ ಜಂಟಿ ಕ್ರಿಯಾಸಮಿತಿ ರಾಜ್ಯವ್ಯಾಪಿ ಬಂದ್‌ಗೆ ಕರೆ ನೀಡಿದೆ. 

ಬಂದ್‌ಗೆ ಬಿಆರ್‌ಎಸ್ ಮತ್ತು ಬಿಜೆಪಿ ಬೆಂಬಲ ವ್ಯಕ್ತಪಡಿಸಿವೆ.

ಜಂಟಿ ಕ್ರಿಯಾಸಮಿತಿಯ ಅಧ್ಯಕ್ಷರೂ ಆಗಿರುವ ರಾಜ್ಯಸಭೆಯ ಬಿಜೆಪಿ ಸದಸ್ಯ ಆರ್. ಕೃಷ್ಣಯ್ಯ ಅವರು, ಎಲ್ಲಾ ಪಕ್ಷದವರ ಬೆಂಬಲ ಕೋರಿದ್ದರು.

ಅಗತ್ಯ ವಸ್ತುಗಳ ಮಾರಾಟವನ್ನು ಹೊರತುಪಡಿಸಿ ಉಳಿದೆಲ್ಲಾ ಮಾದರಿಯ ವ್ಯಾಪಾರಗಳನ್ನೂ ಸ್ಥಗಿತಗೊಳಿಸುವಂತೆ ಅವರು ಕೋರಿದ್ದಾರೆ.

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಹಿಂದುಳಿದ ವರ್ಗದವರಿಗೆ ಶೇ 42ರಷ್ಟು ಮೀಸಲಾತಿ ಕಲ್ಪಿಸುವ ಸರ್ಕಾರದ ಆದೇಶಕ್ಕೆ ಅ. 9ರಂದು ಹೈಕೋರ್ಟ್‌ ತಡೆ ಮಧ್ಯಂತರ ನೀಡಿತ್ತು.

ಇದನ್ನು ವಿರೋಧಿಸಿ ವಿವಿಧ ರಾಜಕೀಯ ಪಕ್ಷಗಳು ಮತ್ತು ಹಿಂದುಳಿದ ಸಂಘಟನೆಗಳು ಧರಣಿ ನಡೆಸಿದ್ದವು. ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಡಿಪೊ ಬಳಿ ಧರಣಿ ನಡೆಸಿ, ವಾಹನಗಳ ಸಂಚಾರಕ್ಕೆ ಅಡ್ಡಿಯುಂಟು ಮಾಡಿದ್ದರು.

ತೆಲಂಗಾಣ ಕಾಂಗ್ರೆಸ್‌ನ ಸಚಿವರು, ಸಂಸದರು, ಶಾಸಕರು ಮತ್ತು ವಿಧಾನ ಪರಿಷತ್ತಿನ ಸದಸ್ಯರು ಧರಣಿಯಲ್ಲಿ ಪಾಲ್ಗೊಂಡಿದ್ದರು ಎಂದು ಪಕ್ಷ ಹೇಳಿದೆ.

ಬಿಆರ್‌ಎಸ್ ಮತ್ತು ಬಿಜೆಪಿ ಪಕ್ಷದ ಮುಖಂಡರೂ ಧರಣಿಯಲ್ಲಿ ಪಾಲ್ಗೊಂಡರು.

ಪ್ರತಿಭಟನೆ ನಡೆಸಿ ಮಾತನಾಡಿದ ತೆಲಂಗಾಣ ಜಾಗೃತಿ ಪಕ್ಷದ ಸಂಸ್ಥಾಪಕಿ ಕಲವಕುಂಟ್ಲ ಕವಿತಾ, 'ಮೀಸಲಾತಿ ಪರವಾಗಿ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡುವಲ್ಲಿ ರಾಜ್ಯ ಸರ್ಕಾರ ಎಡವಿದೆ. ಕಾಂಗ್ರೆಸ್ ಅಥವಾ ಬಿಜೆಪಿ ಯಾರೇ ಆಗರಲಿ, ಅಧಿಕಾರದಲ್ಲಿರುವವರು ಹಿಂದುಳಿದ ವರ್ಗದವರ ದಾರಿ ತಪ್ಪಿಸುತ್ತಿದ್ದಾರೆ. ಚುನಾವಣೆಯನ್ನು ತುರ್ತಾಗಿ ನಡೆಸುವ ಯಾವುದೇ ಜರೂರು ಈಗಿಲ್ಲ. ಆದರೆ ಹಿಂದುಳಿದ ವರ್ಗದವರಿಗೆ ಮೀಸಲಾತಿ ಕಲ್ಪಿಸಿ' ಎಂದು ಆಗ್ರಹಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries