ರಾಂಚಿ: ಇಲ್ಲಿನ ರೆಸ್ಟೋರೆಂಟ್‌ನಲ್ಲಿ ಸಸ್ಯಾಹಾರಿ ಗ್ರಾಹಕರೊಬ್ಬರಿಗೆ ಮಾಂಸದ ಬಿರಿಯಾನಿ ನೀಡಿದ ರೆಸ್ಟೋರೆಂಟ್ ಒಂದರ 47 ವರ್ಷದ ಮಾಲೀಕನನ್ನು ಗುಂಡಿಕ್ಕಿ ಹತ್ಯೆ ಮಾಡಿದ ಪ್ರಕರಣ ಶನಿವಾರ ನಡೆದಿದೆ.
'ಕಾಂಕೆ -ಪಿಠೋರಿಯಾ ರಸ್ತೆಯಲ್ಲಿರುವ ರೆಸ್ಟೋರೆಂಟ್‌ಗೆ ಶನಿವಾರ 11.30ಕ್ಕೆ ತೆರಳಿದ್ದ ಗ್ರಾಹಕರೊಬ್ಬರು ತರಕಾರಿ ಬಿರಿಯಾನಿ ನೀಡುವಂತೆ ಕೇಳಿಕೊಂಡಿದ್ದರು.
ನಂತರ ಪಾರ್ಸೆಲ್ ತೆಗೆದುಕೊಂಡು ಹೋಗಿದ್ದರು. ಇದಾದ ಸ್ವಲ್ಪ ಹೊತ್ತಿನಲ್ಲಿ ಕೆಲವರನ್ನು ಕರೆದುಕೊಂಡು ಬಂದಿದ್ದ ಅವರು, ಮಾಂಸದ ಬಿರಿಯಾನಿ ನೀಡಿದ್ದು ಏಕೆ ಎಂದು ಪ್ರಶ್ನಿಸಿ, ಮಾಲೀಕರ ಜೊತೆ ಜಗಳ ಮಾಡಿದ್ದರು' ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಗ್ರಾಮೀಣ) ಪ್ರವೀಣ್ ಪುಷ್ಕರ್ ತಿಳಿಸಿದ್ದಾರೆ.
ಹೋಟೆಲ್ ಮಾಲೀಕ ವಿಜಯ್ ಕುಮಾರ್ ನಾಗ್ (47) ಅವರು ಟೇಬಲ್‌ನಲ್ಲಿ ಕೂತು ಊಟ ಮಾಡುತ್ತಿದ್ದ ವೇಳೆ ವ್ಯಕ್ತಿಯೊಬ್ಬರು ಪಿಸ್ತೂಲಿನಿಂದ ಗುಂಡಿನ ದಾಳಿ ನಡೆಸಿದರು. ಗುಂಡು ಎದೆಗೆ ತಗುಲಿತು. ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗದಲ್ಲಿ ಅವರು ಕೊನೆಯುಸಿರೆಳೆದರು ಎಂದು ಹೇಳಿದ್ದಾರೆ.
'ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ರಾಜೇಂದ್ರ ವೈದ್ಯಕೀಯ ಶಿಕ್ಷಣ ಸಂಸ್ಥೆಗೆ ಕಳುಹಿಸಿಕೊಡಲಾಗಿದೆ. ಆರೋಪಿಗಳನ್ನು ಬಂಧಿಸಲು ಹಲವು ಕಡೆಗಳಲ್ಲಿ ಪೊಲೀಸರು ದಾಳಿ ನಡೆಸಿದ್ದಾರೆ' ಎಂದು ಹೇಳಿದ್ದಾರೆ.
'ಆಕ್ರೋಶಗೊಂಡ ಸ್ಥಳೀಯರು ಭಾನುವಾರ ಬೆಳಿಗ್ಗೆ ಕಾಂಕೆ-ಪಿಠೋರಿಯಾ ರಸ್ತೆ ತಡೆದು, ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿದರು. ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುವುದು ಎಂದು ಭರವಸೆ ನೀಡಿದ ಬಳಿಕ ವಾಹನ ಸಂಚಾರಕ್ಕೆ ರಸ್ತೆ ತೆರವುಗೊಳಿಸಿದರು' ಎಂದು ಕಾಂಕೆ ಪೊಲೀಸ್ ಠಾಣಾಧಿಕಾರಿ ಪ್ರಕಾಶ್ ರಜಾಕ್ ತಿಳಿಸಿದ್ದಾರೆ.

