HEALTH TIPS

₹21 ಕೋಟಿ ರಿಯಾಯಿತಿ ಪಡೆದು 186 ಐಷಾರಾಮಿ ಕಾರು ಖರೀದಿಸಿದ ಜೈನ ಸಂಘಟನೆ!

ಅಹಮದಾಬಾದ್: ಒಟ್ಟು ₹21 ಕೋಟಿ ಮೊತ್ತದ ರಿಯಾಯಿತಿ ಪಡೆದು, ಒಟ್ಟು 186 ಐಷಾರಾಮಿ ಕಾರುಗಳನ್ನು ಖರೀದಿಸಿ ಜೈನ ಸಮುದಾಯವು ತನ್ನ ಕೊಳ್ಳುವ ಶಕ್ತಿಯನ್ನು ಪ್ರದರ್ಶಿಸಿದೆ.

ದೇಶದಲ್ಲಿ ಐಷಾರಾಮಿ ಕಾರುಗಳನ್ನು ಮಾರಾಟ ಮಾಡುವ ಬಿಎಂಡಬ್ಲ್ಯು, ಔಡಿ, ಮರ್ಸಿಡಿಸ್‌ನಂತಹ ಕಂಪನಿಗಳು ಇಷ್ಟು ಸಂಖ್ಯೆಯಲ್ಲಿ ಕಾರುಗಳನ್ನು ಈ ರೀತಿಯಲ್ಲಿ ಮಾರಾಟ ಮಾಡಿರುವುದು ಇಲ್ಲವೇ ಇಲ್ಲ ಎನ್ನುವಷ್ಟು ಅಪರೂಪ.

ಈ ಪ್ರಮಾಣದ ರಿಯಾಯಿತಿಯನ್ನು ಐಷಾರಾಮಿ ಕಾರು ಕಂಪನಿಗಳ ಬಳಿ ಕುದುರಿಸಿದ್ದು 'ಜೈನ್ ಇಂಟರ್‌ನ್ಯಾಷನಲ್ ಟ್ರೇಡ್ ಆರ್ಗನೈಸೇಷನ್' (ಜೆಐಟಿಒ) ಎಂದು ಅದರ ಉಪಾಧ್ಯಕ್ಷ ಹಿಮಾಂಶು ಶಾ ಅವರು ತಿಳಿಸಿದರು.

ಜೆಐಟಿಒ ಲಾಭದ ಉದ್ದೇಶ ಇಲ್ಲದ ಸಮುದಾಯ ಸಂಘಟನೆ. ಇದು ದೇಶದಾದ್ಯಂತ 65 ಸಾವಿರ ಸದಸ್ಯರನ್ನು ಹೊಂದಿದೆ ಎಂದು ಅವರು ಹೇಳಿದರು.

'₹60 ಲಕ್ಷದಿಂದ ₹1.3 ಕೋಟಿಯವರೆಗೆ ಬೆಲೆ ಇರುವ ಒಟ್ಟು 186 ಕಾರುಗಳನ್ನು ಖರೀದಿದಾರರಿಗೆ ಜನವರಿಯಿಂದ ಜೂನ್‌ವರೆಗಿನ ಅವಧಿಯಲ್ಲಿ ಹಸ್ತಾಂತರ ಮಾಡಲಾಗಿದೆ. ದೇಶದ ಬೇರೆ ಬೇರೆ ಭಾಗಗಳಲ್ಲಿ ಕಾರು ಹಸ್ತಾಂತರ ನಡೆದಿದೆ. ಜೆಐಟಿಒ ನಡೆಸಿದ ರಾಷ್ಟ್ರವ್ಯಾಪಿ ಅಭಿಯಾನವೊಂದು ನಮ್ಮ ಸದಸ್ಯರು ಒಟ್ಟು ರಿಯಾಯಿತಿ ರೂಪದಲ್ಲಿ ₹21 ಕೋಟಿ ಉಳಿತಾಯ ಮಾಡಲು ನೆರವಾಗಿದೆ' ಎಂದು ಶಾ ತಿಳಿಸಿದರು.

ಈ ವಹಿವಾಟಿಗೆ ಸಂಘಟನೆಯು ನೆರವು ಮಾತ್ರ ನೀಡಿದೆ, ವಹಿವಾಟಿನ ಮೂಲಕ ಲಾಭ ಮಾಡಿಕೊಳ್ಳುವ ಕೆಲಸ ಮಾಡಿಲ್ಲ ಎಂದು ಅವರು ಸ್ಪಷ್ಟನೆ ನೀಡಿದರು. ಹೆಚ್ಚಿನ ಕಾರುಗಳನ್ನು ಖರೀದಿಸಿದವರು ಗುಜರಾತಿನ ಜೈನರು ಎಂದು ಅವರು ಹೇಳಿದರು.

ಜೈನ ಸಮುದಾಯದ ಕೊಳ್ಳುವ ಶಕ್ತಿಯು ಬಹಳ ದೊಡ್ಡ ಮಟ್ಟದಲ್ಲಿದೆ. ಅದನ್ನು ಬಳಸಿಕೊಂಡು ಕಾರು ತಯಾರಿಕಾ ಕಂಪನಿಗಳಿಂದ ಉತ್ತಮ ರಿಯಾಯಿತಿಯನ್ನು ಪಡೆಯಬಹುದು ಎಂದು ಜೆಐಟಿಒ ಸಂಘಟನೆಯ ಕೆಲವು ಸದಸ್ಯರು ಸಲಹೆ ನೀಡಿದರು. ಆ ಸಲಹೆ ಆಧರಿಸಿ ಮುಂದಡಿ ಇರಿಸಿ, ಈ ಒಪ್ಪಂದವನ್ನು ಕುದುರಿಸಲಾಯಿತು ಎಂದು ನಿತಿನ್ ಜೈನ್ ಅವರು ವಿವರಿಸಿದರು. ಈ ಒಪ್ಪಂದವನ್ನು ಸಾಧ್ಯವಾಗಿಸುವಲ್ಲಿ ಇವರೂ ಮಹತ್ವದ ಪಾತ್ರ ವಹಿಸಿದ್ದರು.

'ಖರೀದಿ ಶಕ್ತಿಯು ಜೈನರ ಪ್ರಮುಖ ತಾಕತ್ತುಗಳಲ್ಲಿ ಒಂದು. ಹೀಗಾಗಿ, ನಮ್ಮ ಸದಸ್ಯರು ಮಾಡುವ ಖರೀದಿಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ರಿಯಾಯಿತಿ ಪಡೆದುಕೊಳ್ಳಲು ನೇರವಾಗಿ ಕಂಪನಿಗಳನ್ನೇ ಸಂಪರ್ಕಿಸುವ ಆಲೋಚನೆ ನಮಗೆ ಬಂತು. ಕಾರು ತಯಾರಿಕಾ ಕಂಪನಿಗಳು ಕೂಡ ಈ ಬಗೆಯ ವಹಿವಾಟಿನಲ್ಲಿ ತಮಗೂ ಲಾಭವಿದೆ ಎಂಬುದನ್ನು ಕಂಡುಕೊಂಡವು. ಆ ಕಂಪನಿಗಳಿಗೆ ಮಾರಾಟ ವೆಚ್ಚದಲ್ಲಿ ಉಳಿತಾಯ ಆದ ಕಾರಣಕ್ಕೆ ಅವು ನಮಗೆ ರಿಯಾಯಿತಿ ನೀಡಿದವು' ಎಂದು ನಿತಿನ್ ಜೈನ್ ತಿಳಿಸಿದರು.

ಭಾರಿ ಪ್ರಮಾಣದ ರಿಯಾಯಿತಿ ಬಗ್ಗೆ ಸುದ್ದಿ ಆಗುವ ಮೊದಲೇ ಸಮುದಾಯದ ಕೆಲವರು ಕಾರು ಖರೀದಿಸಿದ್ದರು. ನಂತರ ಜೆಐಟಿಒ ಸಂಘಟನೆಯ ಇತರ ಸದಸ್ಯರು ಕಾರು ಖರೀದಿ ಆರಂಭಿಸಿದರು. ಒಟ್ಟು 186 ಕಾರುಗಳನ್ನು ಖರೀದಿಸಲಾಗಿದೆ, ₹21 ಕೋಟಿ ಉಳಿತಾಯ ಆಗಿದೆ. ಸರಾಸರಿ ಲೆಕ್ಕದಲ್ಲಿ ಹೇಳುವುದಾದರೆ ಪ್ರತಿ ಸದಸ್ಯ ಕೂಡ ₹8 ಲಕ್ಷದಿಂದ ₹17 ಲಕ್ಷದವರೆಗೆ ಉಳಿತಾಯ ಮಾಡಿದ್ದಾನೆ. ಈ ಮೊತ್ತವು ಕುಟುಂಬಕ್ಕೆ ಇನ್ನೊಂದು ಕಾರು ಖರೀದಿಸಲು ಸಾಕು' ಎಂದು ಜೈನ್ ಸಂತಸದಿಂದ ಹೇಳಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries