ನವದೆಹಲಿ: ಹಬ್ಬದ ದಟ್ಟಣೆಯ ಸಂದರ್ಭದಲ್ಲಿ ದಾರಿ ತಪ್ಪಿಸುವಂತಹ ಹಾಗೂ ಹಳೆ ವಿಡಿಯೊಗಳನ್ನು ಹರಿಬಿಡುವ ಸಾಮಾಜಿಕ ಜಾಲತಾಣ ಖಾತೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಭಾರತೀಯ ರೈಲ್ವೆ ತಿಳಿಸಿದೆ.
ಅಂತಹ ವಿಡಿಯೊಗಳು ಪ್ರಯಾಣಿಕರಲ್ಲಿ ಅನವಶ್ಯಕ ಭಯ ಉಂಟುಮಾಡುತ್ತವೆ.
ಹೀಗಾಗಿ ಆಡಳಿತದ ಡಿಜಿಟಲ್ ಕಣ್ಗಾವಲು ವ್ಯವಸ್ಥೆಯನ್ನು ವಿಸ್ತರಿಸಲು ನಿರ್ಧರಿಸಲಾಗಿದೆ ಎಂದು ಅದು ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಎಕ್ಸ್, ಇನ್‌ಸ್ಟಾಗ್ರಾಂ ಹಾಗೂ ಯೂಟ್ಯೂಬ್ ಸೇರಿದಂತೆ ಇತರ ಜಾಲತಾಣಗಳಲ್ಲಿ ಕೆಲವು ನಕಲಿ ಖಾತೆಗಳಿವೆ. ಪ್ಲಾಟ್‌ಫಾರ್ಮ್, ರೈಲು ಹಾಗೂ ರೈಲು ನಿಲ್ದಾಣಗಳಲ್ಲಿ ಅಧಿಕ ಜನದಟ್ಟಣೆ ಇರುವಂತಹ ಚಿತ್ರಗಳು ಮತ್ತು ವಿಡಿಯೊಗಳನ್ನು ಈ ಖಾತೆಗಳಿಂದ ಹರಿಬಿಡಲಾಗುತ್ತಿದೆ. ಇಂತಹ 20ಕ್ಕೂ ಅಧಿಕ ಖಾತೆಗಳನ್ನು ಗುರುತಿಸಲಾಗಿದ್ದು, ಇವುಗಳ ವಿರುದ್ಧ ಎಫ್‌ಐಆರ್ ದಾಖಲಿಸುವ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ.
ಸಚಿವಾಲಯವು 24/7 ಸಾಮಾಜಿಕ ಜಾಲತಾಣಗಳ ಮೇಲ್ವಿಚಾರಣೆ ಮಾಡಲು ಪ್ರಾರಂಭಿಸಿದೆ.




