ಬದಿಯಡ್ಕ: ಮುಳ್ಳೇರಿಯ ಹವ್ಯಕ ಮಂಡಲದ ವ್ಯಾಪ್ತಿಗೆ ಆಗಮಿಸಿದ ಶ್ರೀರಾಮಚಂದ್ರಾಪುರ ಮಠದ ಸ್ವರ್ಣ ಪಾದುಕೆಗಳಿಗೆ ಸೋಮವಾರ ಸಂಜೆ ಪಳ್ಳತ್ತಡ್ಕ ವಲಯದ ಪೆರ್ಮುಖ ಮನೆಯಲ್ಲಿ ಧೂಳೀಪೂಜೆ ನಡೆಯಿತು. ನೀರ್ಚಾಲು ವಲಯದಿಂದ ಆಗಮಿಸಿದ ಶಿಷ್ಯಹಿತಮ್ ಸುವರ್ಣ ಸವಾರಿಯನ್ನು ಪೆರ್ಮುಖ ಈಶ್ವರ ಭಟ್ ಮತ್ತು ಮನೆಯವರು ಶ್ರದ್ಧಾಭಕ್ತಿಯೊಂದಿಗೆ ಬರಮಾಡಿಕೊಂಡರು.
ಡಾ. ನಾರಾಯಣ ಪ್ರದೀಪ್ ಧೂಳೀಪೂಜೆ ನೆರವೇರಿಸಿದರು. ಮಂಗಳವಾರ ಬೆಳಗ್ಗೆ ವಿವಿಧ ಮನೆಗಳಲ್ಲಿ ಶ್ರೀರಾಮಚಂದ್ರಾಪುರ ಮಠದ 36 ಯತಿಗಳ ಸಾನ್ನಿಧ್ಯವನ್ನು ಹೊಂದಿರುವ ಸ್ವರ್ಣಪಾದುಕೆಗಳಿಗೆ ಪೂಜೆ ನಡೆಯಿತು. ಮಧ್ಯಾಹ್ನ ಪೆರ್ಮುಖ ಮನೆಯಲ್ಲಿ ಈಶ್ವರ ಭಟ್ ದಂಪತಿಗಳು ಪಾದುಕಾ ಪೂಜೆ ನಡೆಸಿದರು. ಈ ಸಂದರ್ಭದಲ್ಲಿ ಅಷ್ಟಾವಧಾನ ಸೇವೆ ನಡೆಯಿತು. ಪಳ್ಳತ್ತಡ್ಕ ವಲಯದ ಗುರಿಕ್ಕಾರರು, ಪದಾಧಿಕಾರಿಗಳು, ಶ್ರೀಮಠದ ಶಿಷ್ಯವೃಂದದವರು ಪಾಲ್ಗೊಂಡಿದ್ದರು. ಮಾತೆಯರು ಕುಂಕುಮಾರ್ಚನೆ ನಡೆಸಿಕೊಟ್ಟರು. ಇದೇ ಸಂದರ್ಭದಲ್ಲಿ ತಲ್ಪಣಾಜೆ ಶಿವಶಂಕರ ಭಟ್ ಹಾಗೂ ವೆಂಕಟ್ರಾಜ ಕುಂಟಿಕಾನ ಮಠ ಇವರ ಭಾಗವತಿಕೆಯಲ್ಲಿ ಯಕ್ಷಗಾನ ವೈಭವ ಕಾರ್ಯಕ್ರಮ ನಡೆಯಿತು.


