ನವದೆಹಲಿ: ಇಸ್ರೇಲ್-ಗಾಜಾ ನಡುವಿನ ಸಂಘರ್ಷ ಅಂತ್ಯಗೊಳಿಸುವ ನಿಟ್ಟಿನಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಾಯಕತ್ವವನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.
ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, 'ಗಾಜಾದಲ್ಲಿ ಶಾಂತಿ ಸ್ಥಾಪನೆ ಪ್ರಯತ್ನಗಳು ನಿರ್ಣಾಯಕ ಪ್ರಗತಿ ಸಾಧಿಸುತ್ತಿದ್ದು, ಈ ನಿಟ್ಟಿನಲ್ಲಿ ಟಂಪ್ ಅವರ ಮುಂದಾಳತ್ವವನ್ನು ನಾವು ಸ್ವಾಗತಿಸುತ್ತೇವೆ' ಎಂದಿದ್ದಾರೆ.
'ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಹಮಾಸ್ ಒಪ್ಪಿಗೆ ಸೂಚಿಸಿದೆ. ಈ ಬೆಳವಣಿಗೆ ಗಾಜಾದಲ್ಲಿ ಶಾಂತಿಯನ್ನು ಪುನಃಸ್ಥಾಪಿಸುವ ಪ್ರಯತ್ನಗಳಲ್ಲಿ ಮಹತ್ವದ ಹೆಜ್ಜೆಯಾಗಿದೆ. ನ್ಯಾಯಯುತ ಮತ್ತು ಶಾಶ್ವತ ಶಾಂತಿಗಾಗಿ ಇಂತಹ ಎಲ್ಲಾ ಪ್ರಯತ್ನಗಳನ್ನು ಭಾರತ ಯಾವಾಗಲೂ ಬೆಂಬಲಿಸುತ್ತದೆ' ಎಂದೂ ಅವರು ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ.
ಗಾಜಾ ಶಾಂತಿ ಒಪ್ಪಂದದ( ಅಮೆರಿಕ ಪ್ರಸ್ತಾವಿತ 20 ಅಂಶಗಳ ಯೋಜನೆ) ಭಾಗವಾಗಿ 2023ರ ಅಕ್ಟೋಬರ್ 7ರ ದಾಳಿಯಲ್ಲಿ ಸೆರೆಹಿಡಿಯಲಾದ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಹಮಾಸ್ ಒಪ್ಪಿಕೊಂಡಿದೆ. ಈ ಬೆಳವಣಿಗೆ ಬೆನ್ನಲೇ ಗಾಜಾ ಪಟ್ಟಿಯ ಮೇಲಿನ ಬಾಂಬ್ ದಾಳಿ ನಿಲ್ಲಿಸುವಂತೆ ಇಸ್ರೇಲ್‌ಗೆ ಟ್ರಂಪ್ ಸೂಚಿಸಿದ್ದಾರೆ.
ಒತ್ತೆಯಾಳುಗಳನ್ನು ಬಿಡುಗಡೆ ಮಾಡಿ, ಗಾಜಾದ ಆಡಳಿತವನ್ನು ಸ್ವತಂತ್ರ ತಂತ್ರಜ್ಞರ ಪ್ಯಾಲೆಸ್ಟೀನ್ ಸಂಸ್ಥೆಗೆ ಹಸ್ತಾಂತರಿಸಲು ಸಿದ್ಧವಿರುವುದಾಗಿ ಹಮಾಸ್ ಹೇಳಿದೆ. ಆದರೆ ಯೋಜನೆಯ(ಗಾಜಾ ಶಾಂತಿ ಒಪ್ಪಂದ) ಹಲವು ಪ್ರಮುಖ ಅಂಶಗಳ ಕುರಿತು ಹೆಚ್ಚಿನ ಮಾತುಕತೆ ಅಗತ್ಯವಿದೆ ಎಂದೂ ಹೇಳಿದೆ.




