HEALTH TIPS

ಮುಜುಂಗಾವು ಶ್ರೀಕ್ಷೇತ್ರದಲ್ಲಿ ಕಾವೇರಿ ಸಂಕ್ರಮಣ-ಪುಣ್ಯ ತೀರ್ಥ ಸ್ನಾನಗೈದು ಪುನೀತರಾದ ಭಕ್ತ ಸಂದೋಹ

ಕುಂಬಳೆ: ಮುಜುಂಗಾವು ಶ್ರೀ ಪಾರ್ಥಸಾರಥಿ ಶ್ರೀಕೃಷ್ಣ ದೇವಾಲಯದಲ್ಲಿ ಶುಕ್ರವಾರ ಹಬ್ಬದ ಸಂಭ್ರಮ. ಕಾವೇರಿ ಸಂಕ್ರಮಣದ ಪ್ರಯುಕ್ತ ದೇವರ ನಾಡು ಎಂದೇ ಹೆಸರು ಪಡೆದಿರುವ ಕೇರಳದ ಉತ್ತರ ಭಾಗದಲ್ಲಿರುವ ಕಾಸರಗೋಡು ಜಿಲ್ಲೆಯ ಕುಂಬಳೆ ಸೀಮೆಯ ನಾಲ್ಕು ಪ್ರಸಿದ್ಧ ದೇವಸ್ಥಾನಗಳಲ್ಲಿ ಒಂದಾದ ಮುಜುಂಗಾವು ಪಾರ್ಥಸಾರಥಿ ದೇವಾಲಯದ ಸರೋವರದಲ್ಲಿ ನಡೆದ ತೀರ್ಥಸ್ನಾನದಲ್ಲಿ ಸಹಸ್ರಾರು ಭಕ್ತರು ಮಿಂದು ಪುನೀತರಾದರು.


ಇಲ್ಲಿಯ ಸರೋವರದ ನೀರು ಸಲಿಲ ಕಾವೇರಿ ತೀರ್ಥಕ್ಕೆ ಸಮವೆಂದೂ, ಅಕ್ಕಿ, ಹುರುಳಿಗಳನ್ನು ಸಮರ್ಪಿಸಿ ಕೊಳದಲ್ಲಿ ಸ್ನಾನ ಮಾಡುವುದರಿಂದ ಹಲವು ರೀತಿಯ ಚರ್ಮರೋಗಗಳು ನಾಶವಾಗುತ್ತವೆ ಎಂಬ ನಂಬಿಕೆ ಇರುವುದರಿಂದ ಪರವೂರಗಳಿಂದಲೂ ಜಾತಿ, ಭೇದ ಮರೆತು ಪವಿತ್ರ ಸ್ನಾನದಲ್ಲಿ ಪಾಲ್ಗೊಂಡದ್ದು ಕಂಡು ಬಂತು.

ಮುಂಜಾನೆ 4 ಗಂಟೆಗೆ ಕ್ಷೇತ್ರದ ತಂತ್ರಿವರ್ಯ ದೇಲಂಪಾಡಿ ಗಣೇಶ ತಂತ್ರಿ ಬೆಳ್ಳಿ ಕಲಶದಲ್ಲಿ ಕೆರೆಯಿಂದ ತೀರ್ಥವನ್ನು ವಾದ್ಯಘೋಷಗಳ ಮೆರವಣಿಗೆಯಲ್ಲಿ ತಂದು ಶ್ರೀದೇವರಿಗೆ ಅಭಿಷೇಕ ಮಾಡಿದರು. ನಂತರ ತೀರ್ಥಸ್ನಾನದಲ್ಲಿ ಭಕ್ತರು ಭಾಗವಹಿಸಿದರು.


ತಮ್ಮ ಮನೆಯಲ್ಲಿ ಮಿಂದು ಶುಚಿರ್ಭೂತರಾಗಿ ಶ್ರೀ ಕ್ಷೇತ್ರಕ್ಕೆ ಆಗಮಿಸಿ, ದೇವಸ್ಥಾನದ ಮುಂಭಾಗದ ಕೆರೆಯಲ್ಲಿ ಸ್ನಾನ ಮಾಡಿ, ಹುರುಳಿ ಮತ್ತು ಬೆಳ್ತಿಗೆ ಅಕ್ಕಿ ಮಿಶ್ರಣವನ್ನು ಕೆರೆಗೆ ಹಾಕುತ್ತಾ ಪ್ರದಕ್ಷಿಣೆ ಬಂದು ದೇವಸ್ಥಾನದ ಗೋಪುರದಲ್ಲಿ ಇಟ್ಟಿರುವ ಕೊಪ್ಪರಿಗೆಯಲ್ಲಿ ಹಾಕಿದ ಭಕ್ತಾದಿಗಳು ಪಾವನರಾದರು.

ಕೆರೆಯಲ್ಲಿ ಅಕ್ಕಿ, ಹುರುಳಿಗಳನ್ನು ಸಮರ್ಪಿಸಿ ಸ್ನಾನ ಮಾಡುವುದರಿಂದ ಚರ್ಮರೋಗಗಳು ಗುಣಮುಖವಾಗುತ್ತದೆ ಎಂಬುದು ಭಕ್ತ ಜನರ ನಂಬಿಕೆಯಿಂದ ವರ್ಷದಿಂದ ವರ್ಷಕ್ಕೆ ಶ್ರೀ ಕ್ಷೇತ್ರಕ್ಕೆ ಬರುವ ಭಕ್ತಾದಿಗಳ ಸಂಖ್ಯೆ ಹೆಚ್ಚಾಗುತ್ತಿದೆ. 

ಮಜುಂಗಾವು ಕ್ಷೇತ್ರ ಮುಂಭಾಗದ ಮುರ ಪಾರೆಯ ನಡುವೆ ಇರುವ ಅಕ್ಷಯ ಕೆರೆಯಲ್ಲಿ ವರ್ಷಕ್ಕೊಮ್ಮೆ ಕಾವೇರಿ ಸಂಕ್ರಮಣ(ತುಲಾ) ದಿನದಂದು ಮಾತ್ರವೇ ತೀರ್ಥಸ್ನಾನ ನಡೆಯುತ್ತದೆ. ಈ ಹಿನ್ನೆಲೆಯಲ್ಲಿದನ್ನು ಮುಚುಕುಂದ ತೀರ್ಥ ಎನ್ನುತ್ತಾರೆ. ತಲಕಾವೇರಿಯ ತೀರ್ಥಸ್ನಾನಕ್ಕೆ ಇದು ಸಮಾನವೆಂಬ ನಂಬಿಕೆಯಿದ್ದು, ಈ ಕಾರಣದಿಂದಲೇ ತುಲಾ ಸಂಕ್ರಮಣವನ್ನು ಕುಂಬಳೆ ಸೀಮೆಯಲ್ಲಿ ಕಾವೇರಿ ಸಂಕ್ರಮಣವೆಂದು ಆರಾಧಿಸುತ್ತಾರೆ.


ತೀರ್ಥ ಕೆರೆಗೆ ಪ್ರದಕ್ಷಿಣೆ ಬರುತ್ತಿರುವಾಗಲೇ ನವಧಾನ್ಯಗಳನ್ನು ಜಲಸಮರ್ಪಿಸಿ ಬಳಿಕ ತೀರ್ಥಕೆರೆಯಲ್ಲಿ ಮುಳುಗೇಳುವುದು ಸ್ನಾನದ ರೂಢಿ. ಈ ರೀತಿಯ ಸ್ನಾನದಿಂದ ಶರೀರದಲ್ಲಿ ಕಂಡುಬರುವ ಉಣ್ಣಿ(ಕೆಡು) ಕಾಣೆಯಾಗುತ್ತವೆಂದು ಜನನಂಬಿಕೆ. ಸ್ನಾನದ ಬಳಿಕ ದೇವಳಕ್ಕೆ ತೆರಳಿ ಪ್ರಸಾದ ಸ್ವೀಕರಿಸಿ,ಅನಂತರ ಅನ್ನಪ್ರಸಾದ ಸ್ವೀಕರಿಸುವ ಈ ಸಂಭ್ರಮ ಮುಜುಂಗಾವು ದೇವಾಲಯದಲ್ಲಿ ವರ್ಷಕ್ಕೊಮ್ಮೆ ಅತ್ಯಧಿಕ ಜನರು ಸೇರುವ ಕಾರ್ಯಕ್ರಮವಾಗಿದೆ.

ಪಾರ್ಥಸಾರಥಿ ಶ್ರೀಕೃಷ್ಣ ದೇವರ ಪ್ರತಿಷ್ಠೆ ಇರುವ ದೇವಾಲಯದಲ್ಲಿ ಮುಳ್ಳುಸೌತೆಯ ನೈವೇದ್ಯ ದೇವರಿಗೆ ಅತ್ಯಂತ ಪ್ರಿಯವೆಂದು ಪ್ರಾಚೀನ ಕಾಲದಿಂದಲೇ ಜನರು ನಂಬುತ್ತಾರೆ. ಜಾನುವಾರು ರೋಗಗಳ ನಿವಾರಣೆಗೆ, ಕೃಷಿ ಧಾನ್ಯ ಬೆಳೆಗೆ ಒದಗುವ ಉಪದ್ರವಕಾರೀ ಕ್ರಿಮಿಕೀಟಗಳ ನಾಶಕ್ಕೆ ಜನರು ಈ ದೇವಾಲಯಕ್ಕೆ ಮುಳ್ಳುಸೌತೆಯ ಕಾಣಿಕೆ ನೀಡುವ ವಾಡಿಕೆ ಇದೆ. ಶ್ರೀ ಕ್ಷೇತ್ರವು ಮುಚುಕುಂದ ಮುನಿಗಳ ಪ್ರತಿಷ್ಠೆಯೆಂದೂ ಈ ಕಾರಣದಿಂದ ಇದು ಮುಜುಂಗಾವು ಎಂದೆನಿಸಿಕೊಂಡಿದೆಯೆಂದೂ ಹೇಳಲಾಗುತ್ತದೆ.

ಸರತಿ ಸಾಲಲ್ಲಿ ಭಕ್ತರು:

ದೇವರ ದರ್ಶನ ಪಡೆಯಲು ವಿಶೇಷ ವ್ಯವಸ್ಥೆಯಿದ್ದರೂ, ಭಕ್ತ ಸಮೂಹ ಹರಿದು ಬರುತ್ತಲೇ ಇದ್ದುದರಿಂದ ಗಂಟೆಗಳ ಕಾಲ ಸರತಿಯಲ್ಲಿ ನಿಲ್ಲಬೇಕಾದ ದೃಶ್ಯ ಕಂಡು ಬಂತು.

ವಾಹನ ನಿಲುಗಡೆಗೆ ಹಾಗೂ ತೀರ್ಥಸ್ನಾನ ಸುಗಮವಾಗಿ ಸಾಗಲು ಅಚ್ಚುಕಟ್ಟಾದ ವ್ಯವಸ್ಥೆ ಮಾಡಲಾಗಿತ್ತು. ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆಯ ಬಳಿಕ ತೀರ್ಥಸ್ನಾನ ಮುಕ್ತಾಯವಾಯಿತು. ಅನಂತರ ತೀರ್ಥಸ್ನಾನದ ಅಂಗವಾಗಿ ಕ್ಷೇತ್ರದಲ್ಲಿ ಭಕ್ತರಿಗೆ ಅನ್ನದಾನದ ವ್ಯವಸ್ಥೆ ಮಾಡಲಾಗಿತ್ತು. ಸುಮಾರು ಮುನ್ನೂರಕ್ಕೂ ಮಿಕ್ಕಿ ಸ್ವಯಂಸೇವಕರು ಶಿಸ್ತಿನ ವ್ಯವಸ್ಥೆಗೆ ಸಹಕರಿಸುತ್ತಿದ್ದರು.


ವಿಶೇಷತೆಗಳು:

* ಲಕ್ಷಕ್ಕಿಂತಲೂ ಹೆಚ್ಚಿನ ಭಕ್ತಾದಿಗಳು ಶ್ರೀ ಕ್ಷೇತ್ರಕ್ಕೆ ಆಗಮಿಸಿ ಕೆರೆಯಲ್ಲಿ ತೀರ್ಥಸ್ನಾನ ಮಾಡಿ ಪಾವನರಾಗಿ ಧನ್ಯತೆಯಿಂದ ಮರಳಿದರು.


* ಅನ್ಯ ಊರಿನ ಭಕ್ತಾದಿಗಳಿಗೆ ಶ್ರೀ ಕ್ಷೇತ್ರದ ಪಾವಿತ್ರ್ಯತೆಯ ಬಗ್ಗೆ, ಮಾಡಬೇಕಾಗಿರುವ ವಿಧಿ ವಿಧಾನಗಳ ಕುರಿತು ಮೈಕ್‍ನಲ್ಲಿ ಮಾಹಿತಿಗಳನ್ನು ನೀಡುತ್ತಿದ್ದರು..


* 50 ಸಾವಿರಕ್ಕಿಂತಲೂ ಹೆಚ್ಚು ಭಕ್ತರು ಅನ್ನ ಪ್ರಸಾದವನ್ನು ಸ್ವೀಕರಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries