ಕಾಸರಗೋಡು: ಜಪಾನಿಗೆ ಭಾರತೀಯ ರಾಯಭಾರಿಯಾಗಿ ಕಾಸರಗೋಡು ಮೂಲದ ನಿವಾಸಿ ನಗ್ಮಾ ಮೊಹಮ್ಮದ್ ಮಾಲಿಕ್ ಅವರನ್ನು ಕೇಂದ್ರ ಸರ್ಕಾರ ನೇಮಿಸಿದೆ. ನಗ್ಮಾ ಅವರು ಕಾಸರಗೋಡು ಕೋಟೆ ರಸ್ತೆಯ ಮಹಮ್ಮದ್ ಹಬೀಬುಲ್ಲಾ-ಸುಲುಭಾನು ದಂಪತಿ ಪುತ್ರಿಯಾಗಿದ್ದಾರೆ. ಕೇಂದ್ರ ಸರ್ಕಾರದ ಓವರ್‍ಸೀಸ್ ಕಮ್ಯೂನಿಕೇಶನ್ ಇಲಾಖೆಯಲ್ಲಿ ಉದ್ಯೋಗಿಯಾಗಿದ್ದ ಮಹಮ್ಮದ್ ಹಬೀಬುಲ್ಲಾ ತಮ್ಮ ಕುಟುಂಬ ದೆಹಲಿಯಲ್ಲಿ ನೆಲೆಸಿದ್ದು, ಈ ಹಿನ್ನೆಲೆಯಲ್ಲಿ ನಗ್ಮಾ ಅವರು ತಮ್ಮ ಶಿಕ್ಷಣ ದೆಹಲಿಯಲ್ಲೇ ಪೂರೈಸಿದ್ದಾರೆ. ನಗ್ಮಾ ಮಹಮ್ಮದ್ ಮಾಲಿಕ್ ಅವರು ಇಂಗ್ಲಿಷ್ ಸಾಹಿತ್ಯದಲ್ಲಿ ಪದವೀಧರೆ ಹಾಗೂ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರೆಯಾಗಿದ್ದಾರೆ. ಈ ಹಿಂದೆ ಪೋಲೆಂಡ್‍ನಲ್ಲಿ ಭಾರತೀಯ ರಾಯಭಾರಿಯಾಗಿ ಸೇವೆ ಸಲ್ಲಿಸಿದ್ದರು.ಪ್ಯಾರಿಸ್ ಯುನೆಸ್ಕೋದ ಭಾರತೀಯ ಮಿಷನ್‍ನಲ್ಲಿ ಮೊದಲ ನೇಮಕಾತಿ ಪಡೆದಿದ್ದ ಇವರು, ಭಾರತದ ಮೊದಲ ಮಹಿಳಾ ಡೆಪ್ಯುಟಿ ಚೀಫ್ ಪ್ರೊಟೋಕೋಲ್(ಸೆರೆಮೋನಿಯಲ್)ಆಗಿಯೂ ಸೇವೆ ಸಲ್ಲಿಸಿದ್ದರು.
1991ರಲ್ಲಿ ಭಾರತೀಯ ವಿದೇಶಾಂಗ ಸೇವೆಗೆ ಸೇರ್ಪಡೆಗೊಂಡಿದ್ದ ಇವರು ಪ್ಯಾರಿಸ್‍ನಲ್ಲಿ ತನ್ನ ರಾಜತಾಂತ್ರಿಕ ಜೀವನ ಆರಂಭಿಸಿದ್ದಾರೆ. ನೇಏಪಾಳ ಹಗೂ ಶ್ರೀಲಂಕಾದಲ್ಲಿ ಭಾರತೀಯ ಫಸ್ಟ್ ಸೆಕ್ರೆಟರಿ ಹಾಗೂ ಕೌನ್ಸಿಲರ್ ಆಗಿಯೂ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ. ನಗ್ಮಾ ಮಹಮ್ಮದ್ ಮಾಲಿಕ್ ಅವರು ಖ್ಯಾತ ಸಾಹಿತಿಸಾರಾ ಅಬೂಬಕ್ಕರ್ ಅವರ ಸಹೋದರಿ ಪುತ್ರಿಯಾಗಿದ್ದಾರೆ.





