ಕಾಸರಗೋಡು: ಶಬರಿಮಲೆ ಕ್ಷೇತ್ರ ದರ್ಶನಕ್ಕೆ ತಲುಪಿದ ಕಾಸರಗೋಡು ನಿವಾಸಿಗಳಾದ ಅಯ್ಯಪ್ಪ ವ್ರತಧಾರಿಗಳಿಂದ 10ಸಾವಿರ ರೂ.ಹಣ ಪಡೆದು ವಂಚಿಸಿದ, ಕ್ಷೇತ್ರದ ಡೋಲಿ ಕಾರ್ಮಿಕರಬ್ಬರನ್ನು ಪಂಪಾ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಇಡುಕ್ಕಿ ಪೀರುಮೇಡು ರಾಣಿಕೋವಿಲ್ ಎಸ್ಟೇಟ್ ನಿವಾಸಿಗಳಾದ ಕಣ್ಣನ್ ಹಾಗೂ ರಘು ಆರ್. ಬಂಧಿತರು. ತುಲಾಮಾಸದ ಪೂಜೆಗಾಗಿ ಅ. 18ರಂದು ಶಬರಿಮಲೆ ದರ್ಶನಕ್ಕೆ ತೆರಳಿದ್ದ ಕಾಸರಗೋಡು ನಿವಾಸಿಗಳನ್ನೊಳಗೊಂಡ ತಂಡವನ್ನು ಪಂಪೆಯಲ್ಲ ಪರಿಚಯಮಾಡಿಕೊಂಡ ಪಂಪೆಯ ಡೋಲಿ ಕಾರ್ಮಿಕರಿಬ್ಬರು, ಹತ್ತು ಸಾವಿರ ರೂ. ನೀಡಿದಲ್ಲಿ ಸರತಿಸಾಲು ಹೊರತಾಗಿ ಶೀಘ್ರ ದೇವರ ದರ್ಶನಕ್ಕೆ ಅವಕಾಶಮಾಡಿಕೊಡುವುದಾಗಿ ಭರವಸೆ ನೀಡಿದ್ದರು. ಇದಕ್ಕೆ ಒಪ್ಪಿದ ಕಾಸರಗೋಡಿನ ತಂಡ ಹಣ ಸಂಗ್ರಹ ಮಾಡಿ ಇವರಿಗೆ ನಿಡಿದ್ದರು. ಪಂಪೆಯಿಂದ ವಾವರ ನಡೆ ವರೆಗೂ ಇವರ ಜತೆಗಿದ್ದ ಆರೋಪಿಗಳಿಬ್ಬರೂ, ಅಲ್ಲಿಂದ ಏಕಏಕಿ ನಾಪತ್ತೆಯಾಗಿದ್ದರು. ವ್ರತಧಾರಿಗಳು ಆಸುಪಾಸು ಹುಡುಕಾಡಿದರೂ, ಇವರ ಪತ್ತೆಯಾಗದಿರುವುದರಿಂದ ತಾವು ವಂಚನೆಗೊಳಗಾಗಿರುವ ವಿಷಯ ತಿಳಿದ ಭಕ್ತರು ದೇವಸ್ವಂ ಮಂಡಳಿಗೆ ದೂರು ನೀಡಿದ್ದರು. ಈ ಬಗ್ಗೆ ತನಿಖೆ ನಡೆಸಿದಾಗ ಪಂಪೆಯಿಂದ ಸನ್ನಿಧಾನಕ್ಕೆ ಡೋಲಿ ಹೊತ್ತೊಯ್ಯುವ ಇಬ್ಬರು ಸಿಬ್ಬಂದಿ ವಂಚನೆಯಲ್ಲಿ ಶಾಮೀಲಾಗಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ತಿರುವಾಂಕೂರು ದೇವಸ್ವಂ ವಿಜಿಲೆನ್ಸ್ ತಂಡ ತನಿಖೆ ನಡೆಸಿ ವರದಿ ಸಲ್ಲಿಸಿತ್ತು. ಜತೆಗೆ ಇಬ್ಬರೂ ಡೋಲಿ ಕಾರ್ಮಿಕರ ಕೆಲಸದ ಪರ್ಮಿಟ್ ರದ್ದುಗೊಳಿಸುವಂತೆ ದೇವಸ್ವಂ ಮಂಡಳಿಗೆ ಪೊಲೀಸರೂ ಪತ್ರ ಬರೆದಿದ್ದಾರೆ. ಭಕ್ತಾದಿಗಳ ದಟ್ಟಣೆ ಸಂದರ್ಭ ಕೆಲವು ಡೋಲಿ ಕಾರ್ಮಿಕರು ಭಕ್ತಾದಿಗಳಿಂದ ಹಣ ಪಡೆದು, ಸರತಿಸಾಲಲ್ಲಿ ನಿಲ್ಲದೆ ಭಕ್ತಾದಿಗಳನ್ನು ನೇರ ದರ್ಶನಕ್ಕೆ ಕರೆದೊಯ್ಯುತ್ತಿರುವುದಗಿ ಈ ಹಿಂದೆಯೂ ಅರೋಪ ಕೇಳಿ ಬಂದಿತ್ತು.




