ಕಾಸರಗೋಡು: ಭಾಷಾವಾರು ಪ್ರಾಂತ್ಯ ರಚನೆಯ ದುಷ್ಪರಿಣಾಮದಿಂದ ಕಾಸರಗೋಡು ಕೇರಳ ಪಾಲಾಗಿದ್ದು, ಇಲ್ಲಿನ ಮೂಲ ನಿವಾಸಿಗಳಾಗಿರುವ ಕನ್ನಡಿಗರ ಸಂವಿಧಾನಾತ್ಮಕ ಹಕ್ಕು ಉಳಿಸುವ ಮತ್ತು ಕೇರಳ ಸರ್ಕಾರದ ಕಡ್ಡಾಯ ಮಲಯಾಳ ಹೇರಿಕೆ ವಿರುದ್ಧ ಧರಣಿ ಕಾರ್ಯಕ್ರಮ ನ. 1ರಂದು ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಎದುರು ನಡೆಯಲಿದೆ. ಕನ್ನಡಿಗರ ಹಕ್ಕೊತ್ತಾಯ ದಿನಾಚರಣೆ ಅಂಗವಾಗಿ ಧರಣಿ ಆಯೋಜಿಸಲಾಗಿದೆ.
ವಿವಿಧ ಬೇಡಿಕೆ ಮುಂದಿರಿಸಿ ಕನ್ನಡಿಗರು ನಡೆಸುತ್ತಿರುವ ಧರಣಿಗೆ ಕಾಸರಗೋಡು ಜಿಲ್ಲಾ ಕನ್ನಡ ಜಾಗೃತಿ ಸಮಿತಿ ತನ್ನ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದು, ಈ ಬಗ್ಗೆ ತನ್ನ ಕಚೇರಿಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನ ಕೈಗೊಂಡಿತು. ಸಮಿತಿ ಅಧ್ಯಕ್ಷ ಭರತ್‍ರಾಜ್ ಗಟ್ಟಿ ಉಳಿಯತ್ತಡ್ಕ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಾಧ್ಯಕ್ಷ ಯೋಗೀಶ್ ಕೋಟೆಕಣಿ, ಪ್ರಧಾನ ಸಂಚಾಲಕಿ ಕಾವ್ಯಾಕುಶಲ, ಸಂಚಾಲಕರಾದ ಅಭಿಲಾಷ್, ಮುಕುಂದರಾಜ್, ಸದಸ್ಯರಾದ ಗುರುಪ್ರಸಾದ್ ಕೋಟೆಕಣಿ, ದಿವಾಕರ ಪಿ ಅಶೋಕನಗರ, ಪ್ರದೀಪ್ ಬೇಕಲ್, ಜಗದೀಶ್ ಕುಡ್ಲು, ಶ್ರೀಕಾಂತ್ ಕಾಸರಗೋಡು, ಮುರಳಿಪಾರೆಕಟ್ಟ, ಹರೀಶ್ ಪಾರೆಕಟ್ಟ ಮೊದಲಾದವರು ಉಪಸ್ಥಿತರಿದ್ದರು.




