ಕಾಸರಗೋಡು: ನಗರದ ಹೊರವಲಯದ ಮಾನ್ಯದಲ್ಲಿ ನೂತನವಗಿ ಅಂಭಗೊಳ್ಳಲಿರುವ ಕೆಎಂಸಿಟಿ ಎಂಜಿನಿಯರಿಂಗ್ ಆಂಡ್ ಮ್ಯಾನೇಜ್‍ಮೆಂಟ್ ಕಾಲೇಜಿನ ಉದ್ಘಾಟನೆ ನ. 3 ರಂದು ಬೆಳಗ್ಗೆ 9.30ಕ್ಕೆ ಕ್ಯಾಂಪಸ್‍ನಲ್ಲಿ ಜರುಗಲಿದೆ. ಎಪಿಜೆ ಅಬ್ದುಲ್ ಕಲಾಂ ತಾಂತ್ರಿಕ ವಿಶ್ವವಿದ್ಯಾಲಯ (ಕೆಟಿಯು) ಗೆ ಸಂಯೋಜಿತವಾಗಿದ್ದು, ಎಐಸಿಟಿಇಯಿಂದ ಅಂಗೀಕಾರ ಪಡೆದಿರುವುದಾಗಿ ಸಂಸ್ಥೆ ಸ್ಥಾಪಕಾಧ್ಯಕ್ಷ ಡಾ. ಕೆ. ಮೊಯ್ದು ಸುದ್ದಿಗೋಷ್ಠೀಯಲ್ಲಿ ತಿಳಿಸಿದ್ದಾರೆ.
3 ರಂದು ಬೆಳಗ್ಗೆ ನಡೆಯುವ ಸಮಾರಂಭದಲ್ಲಿ ರಾಜ್ಯ ಲೋಕೋಪಯೋಗಿ, ಪ್ರವಾಸೋದ್ಯಮ ಖಾತೆ ಸಚಿವ ಪಿ. ಎ. ಮುಹಮ್ಮದ್ ರಿಯಾಜ್ ಕಾಲೇಜು ಉದ್ಘಾಟಿಸುವರು.
ಸಂಸದ ರಾಜಮೋಹನ್ ಉಣ್ಣಿತ್ತಾನ್, ಕರ್ನಾಟಕ ರಾಜ್ಯ ಅಲೈಡ್ ಮತ್ತು ಹೆಲ್ತ್‍ಕೇರ್ ಕೌನ್ಸಿಲ್‍ನ ಡಾ. ಯು. ಟಿ. ಇಫ್ತಿಕರ್, ಶಾಸಕರಾದ ಎನ್. ಎ. ನೆಲ್ಲಿಕುನ್ನು, ಇ. ಚಂದ್ರಶೇಖರನ್, ಎ. ಕೆ.ಎಂ. ಅಶ್ರಫ್, ಸಿ.ಎಚ್ ಕುಞಂಬು, ಎಂ.ರಾಜಗೋಪಾಲನ್, ಸಿಂಡಿಕೇಟ್ ಸದಸ್ಯರಾದ ಕೆ.ಸಚಿನ್ ದೇವ್, ವಕೀಲ ಐ.ಸಾಜು, ಬದಿಯಡ್ಕ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಾಂತಾ, ಕರ್ನಾಟಕದ ಕನಿಷ್ಠ ವೇತನ ಸಲಹಾ ಮಂಡಳಿಯ ಅಧ್ಯಕ್ಷ ಬಿ.ಟಿ.ಎಂ. ಶಾಹಿದ್ ತೆಕ್ಕಯಿಲ್ ಅತಿಥಿಗಳಾಗಿ ಭಾಗವಹಿಸುವರು.
ಕಾಸರಗೋಡು ಜಿಲ್ಲೆಯ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ಸನಿಹದ ಜಿಲ್ಲೆ ಮತ್ತು ನೆರೆಯ ರಾಜ್ಯಗಳನ್ನು ಅವಲಂಬಿಸುತ್ತಿರುವುದನ್ನು ಮನಗಂಡು ಕೆಎಂಸಿಟಿ ನೂತನ ಸಂಸ್ಥೆ ಆರಂಭಿಸಿದ್ದು, ಕಾಸರಗೋಡು ಜಿಲ್ಲೆಯು ಎದುರಿಸುತ್ತಿರುವ ಶೈಕ್ಷಣಿಕ ಹಿಂದುಳಿಯುವಿಕೆ ನಿವಾರಿಸಲು ಹೊಸ ಕ್ಯಾಂಪಸ್ ಸಹಕಾರಿಯಾಗಲಿದೆ. ಕಾಲೇಜಿನಲ್ಲಿ ಈ ವರ್ಷದಿಂದಲೇ ಬಿ.ಟೆಕ್ ಕಾರ್ಯಕ್ರಮಗಳಿಗೆ ಸರ್ಕಾರಿ ಅನುಮೋದಿತ ಶುಲ್ಕದಲ್ಲಿ ಪ್ರವೇಶ ನೀಡಲಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾಲೇಜು ಪ್ರಾಂಶುಪಾಲರಾದ ಅನ್ಶಾದ್, ಜಿತಿನ್.ವಿ ಮತ್ತು ಮುಹಮ್ಮದ್ ಸಲೀಂ ಉಪಸ್ಥತರಿದ್ದರು.




