ಕಾಸರಗೋಡು: ಜಿಲ್ಲೆಯಲ್ಲಿ ಏಮ್ಸ್ ಸ್ಥಾಪಿಸಲು ಜಿಲ್ಲೆಯ ರಾಜಕೀಯ, ಸಾಮಾಜಿಕ, ಸಾಂಸ್ಕøತಿಕ ಮತ್ತು ಸ್ವಯಂಸೇವಾ ಸಂಸ್ಥೆಗಳ ಕಾರ್ಯಕರ್ತರ ಸಹಕಾರ ಅಗತ್ಯ ಎಂದು ಬಿಜೆಪಿ ಕೋಯಿಕ್ಕೋಡ್ ವಲಯ ಸಮಿತಿ ಅಧ್ಯಕ್ಷ, ವಕೀಲ ಕೆ. ಶ್ರೀಕಾಂತ್ ತಿಳಿಸಿದ್ದಾರೆ.
ಕಾಸರಗೋಡಿನಲ್ಲಿ ಏಮ್ಸ್ ಸ್ಥಾಪಿಸುವ ನಿಟ್ಟಿನಲ್ಲಿ ಸಮಾನ ಮನಸ್ಕ ವ್ಯಕ್ತಿಗಳ ಸಭೆ ಆಯೋಜಿಸಲಾಗುವುದು ಎಂದು ತಿಳಿಸಿದ ಅವರು, ಸಭೆಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಸೇರಿದಂತೆ ಜಿಲ್ಲೆಯ ಸಂಸದ, ಶಾಸಕರು ಹಾಗೂ ಇತರ ಜನಪ್ರತಿನಿಧಿಗಳನ್ನು ಭಾಗವಹಿಸುವಂತೆ ಮಾಡಲಾಗುವುದು. ಕಾಸರಗೋಡಿನಲ್ಲಿ ಏಮ್ಸ್ ಸ್ಥಾಪಿಸುವ ವಿಷಯದಲ್ಲಿ ಆಸಕ್ತಿ ಹೊಂದಿರುವ ಎಲ್ಲರನ್ನೂ ಸಭೆಗೆ ಆಹ್ವಾನಿಸಲಾಗುವುದು.
ಕಾಸರಗೋಡು ಜಿಲ್ಲೆಯ ಆರೋಗ್ಯ ವಲಯದ ಮೂಲಸೌಕರ್ಯದ ಬಗ್ಗೆ ಜಾರಿಯಲ್ಲಿರುವ ಕೊರತೆಯನ್ನು ನೀಗಿಸಲು ಏಮ್ಸ್ ನಂತಹ ಸಂಸ್ಥೆ ಅತ್ಯಗತ್ಯವಾಗಿದೆ. ಎಂಡೋ ಸಲ್ಫಾನ್ ಸಂತ್ರಸ್ತರು ಸೇರಿದಂತೆ ಚಿಕಿತ್ಸೆಗಾಗಿ ಇತರ ರಾಜ್ಯ ಹಾಗೂ ಜಿಲ್ಲೆಗಳನ್ನು ಆಶ್ರಯಿಸಬೇಕಾದ ಕಾಸರಗೋಡು ಜಿಲ್ಲೆಗೆ ಏಮ್ಸ್‍ನಂತಹ ಸಂಸ್ಥೆ ಅನಿವಾರ್ಯವಾಗಿದೆ. ಏಮ್ಸ್ ಸ್ಥಾಪನೆಗೆ ಅಗತ್ಯವಿರುವ ಭೂಮಿ ಕಾಸರಗೋಡಿನಲ್ಲಿ ಲಭ್ಯವಿರುವುದಾಗಿಯೂ ಶ್ರೀಕಾಂತ್ ಸ್ಪಷ್ಟಪಡಿಸಿದರು. ರಾಜ್ಯ ಸರ್ಕಾರದ ಏಮ್ಸ್ ಮಂಜೂರಾತಿಗಿರುವ ಪರಿಗಣನಾ ಪಟ್ಟಿಯಲ್ಲಿ ಕಾಸರಗೋಡು ಜಿಲ್ಲೆಯನ್ನು ಒಳಪಡಿಸಲು ಮೊದಲ ಆದ್ಯತೆ ನೀಡಬೇಕಾಗಿದೆ. ಇದಕ್ಕೆ ಎಡರಂಗ ಸರ್ಕಾರ ಇಚ್ಛಾಶಕ್ತಿ ಪ್ರಕಟಿಸುವುದು ಅನಿವಾರ್ಯ ಎಂದು ಶ್ರೀಕಾಂತ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.





