ಕಾಸರಗೋಡು: ಯುವ ವಕೀಲೆ, ಕುಂಬಳೆ ಸನಿಹದ ಮುಟ್ಟಂ ಬೇರಿಕೆ ನಿವಾಸಿ ಕೃತೇಶ್ ಅವರ ಪತ್ನಿ, ಸಿ. ರಂಜಿತಾ ಕುಮಾರಿ(30)ಆತ್ಮಹತ್ಯೆ ಬಗೆಗಿನ ನಿಗೂಢತೆ ಮುಂದುವರಿದಿದ್ದು, ರಂಜಿತಾ ಅವರ ಜತೆ ನಿಕಟ ಸಂಪರ್ಕ ಹೊಂದಿದ್ದ ವಕೀಲರೊಬ್ಬರು ತಲೆಮರೆಸಿಕೊಂಡಿರುವುದು ಹಲವು ಸಂಶಯಗಳಿಗೆ ಕಾರಣವಾಗಿದೆ. ರಂಜಿತಾ ಕುಮಾರಿ ಸಾವಿನ ನಂತರ ಈ ವಕೀಲ ರೈಲಿನ ಮೂಲಕ ಪ್ರಯಾಣಿಸಿರುವುದಾಗಿ ಮಾಹಿತಿ ಲಭಿಸಿದೆ. ವಕೀಲೆ ತ್ಮಹತ್ಯೆಗೂ ಮೊದಲು ಇವರ ಮೊಬೈಲ್‍ಗೆ ವ್ಯಕ್ತಿಯೊಬ್ಬರು ವಿಡಿಯೋ ಕರೆ ಮಾಡಿರುವುದನ್ನು ಪೊಲೀಸರು ಪತ್ತೆಹಚ್ಚಿದ್ದು, ಈ ನಿಟ್ಟಿನಲ್ಲಿ ಸಮಗ್ರ ತನಿಖೆ ನಡೆಸುವ ನಿಟ್ಟಿನಲ್ಲಿ ಮೊಬೈಲನ್ನು ತಿರುವನಂತಪುರದ ಕೇಂದ್ರ ಫಾರೆನ್ಸಿಕ್ ಲ್ಯಾಬ್‍ಗೆ ಕಳುಹಿಸಿಕೊಡಲಾಗಿದೆ.
ರಂಜಿತಾ ಕುಮಾರಿ ಅವರ ಮೃತದೇಹ ಕುಂಬಳೆಯಲ್ಲಿರುವ ತನ್ನ ಕಚೇರಿಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಸನಿಹದಲ್ಲಿ'ಸಾಯುತ್ತೇನೆ'ಎಂಬ ಒಕ್ಕಣೆಯುಳ್ಳ ಪತ್ರವೂಪೊಲೀಸರಿಗೆ ಲಭಿಸಿತ್ತು. ಕಾಸರಗೋಡಿನಲ್ಲಿ ವಕೀಲೆಯಾಗಿರುವ ಇವರು, ಪ್ರಜಾಪ್ರಭುತ್ವವಾದಿ ಮಹಿಳಾ ಅಸೋಸಿಯೇಶನ್ ಕುಂಬಳೆ ಏರಿಯಾ ಸಮಿತಿ ಸದಸ್ಯೆ, ಗ್ರಾಮ ಸಮಿತಿ ಕಾರ್ಯದರ್ಶಿ, ಡಿವೈಎಫ್‍ಐ ಬ್ಲಾಕ್ ಘಟಕ ಕೋಶಾಧಿಕಾರಿಯಾಗಿದ್ದರು.




