ಕಾಸರಗೋಡು: ಸ್ವತ;ಪುತ್ರಿಯ ಮೇಲೆ ನಿರಂತರ ಲೈಂಗಿಕ ದೌರ್ಜನ್ಯವೆಸಗಿ ಗರ್ಭಿಣಿಯಾಗಿಸಿದ ದುರುಳ ತಂದೆಯನ್ನು ಹೊಸದುರ್ಗ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೊಡಗು ನಿವಾಸಿ ಹಾಗೂ ಹೊಸದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯ ಕ್ವಾಟ್ರಸ್ ಒಂದರಲ್ಲಿ ವಾಸಿಸುತ್ತಿರುವ 45ರ ಹರೆಯದ ವ್ಯಕ್ತಿ ಬಂಧಿತ.
ಕ್ವಾಟ್ರಸ್‍ನಲ್ಲಿ ಕಳೆದ ಕೆಲವು ಸಮಯದಿಂದ ಪತ್ನಿ, ಮಕ್ಕಳೊಂದಿಗೆ ವಾಸಿಸುತ್ತಿದ್ದನು. ಎಂಟನೇ ತರಗತಿಯಲ್ಲಿ ಕಲಿಯುತ್ತಿರುವ ಪುತ್ರಿಗೆ ಅತಿಯಾದ ಸೊಂಟನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಈಕೆಯನ್ನು ಮಂಗಳೂರಿನ ಆಸ್ಪತ್ರೆಯೊಂದಕ್ಕೆ ಕರೆದೊಯ್ದು ತಪಾಸಣೆಗೊಳಪಡಿಸಿದಾಗ ಬಾಲಕಿ ನಾಲ್ಕುವರೆ ತಿಂಗಳ ಗರ್ಭಿಣಿಯೆಂದು ಬಹಿರಂಗಗೊಂಡಿತ್ತು. ಬಾಲಕಿ ನೀಡಿದ ಮಾಹಿತಿಯನ್ವಯ ಈಕೆಯ ತಂದೆಯೇ ಕೃತ್ಯವೆಸಗಿರುವುದು ಬೆಳಕಿಗೆ ಬಂದಿತ್ತು. ಈ ಬಗ್ಗೆ ವೈದ್ಯರು ಹೊಸದುರ್ಗ ಠಾಣೆಗೆ ಮಾಹಿತಿ ನೀಡಿದ್ದರು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು, ಆರೋಪಿ ವಿದೇಶಕ್ಕೆಪರಾರಿಯಾಗುವ ಸಾಧ್ಯತೆ ಮನಗಂಡು, ಈತ ವಾಸಿಸುತ್ತಿರುವ ಕ್ವಾಟ್ರಸ್‍ಗೆ ತೆರಳಿ ಈತನ ಪಾಸ್‍ಪೋರ್ಟ್ ವಶಕ್ಕೆ ತೆಗೆದುಕೊಮಡಿದ್ದರು. ಈ ಮಧ್ಯೆ ಸ್ಕೂಟರಲ್ಲಿ ಪರಾರಿಯಾಗಿದ್ದ ಆರೋಪಿ ಪತ್ತೆಗೆ ಕಾರ್ಯಾಚರಣೆ ಮುಂದುವರಿಸಿದ ಪೊಲೀಸರು, ಸಿಸಿ ಕ್ಯಾಮರಾ ದೃಶ್ಯಾವಳಿ ಹಿನ್ನೆಲೆಯಲ್ಲಿ ಚೆರ್ಕಳ ವರೆಗೂ ಹಿಂಬಾಲಿಸಿದ್ದು, ನಂತರ ಮಾಹಿತಿ ಲಭ್ಯವಾಗಿರಲಿಲ್ಲ. ಈ ಬಗ್ಗೆ ಸ್ಥಳೀಯರ ನೆರವು ಪಡೆದ ಪೊಲೀಸರು, ಶುಕ್ರವಾರ ಈತ ಕ್ವಾಟ್ರಸ್‍ಗೆ ಆಗಮಿಸುತ್ತಿದ್ದಂತೆ ನಾಗರಿಕರ ಸಹಾಯದಿಂದ ಈತನನ್ನು ಸೆರೆಹಿಡಿದಿದ್ದಾರೆ. 'ಪೋಕ್ಸೋ ಅನ್ವಯ ಈತನ ವಿರುದ್ಧ ಕೇಸು ದಾಖಲಿಸಲಾಗಿದೆ. ತಾಯಿ ಮನೆಯಲ್ಲಿ ಇಲ್ಲದ ವೇಳೆ ಕಿರುಕುಳ ನೀಡಿರುವುದಾಗಿ ಬಾಲಕಿ ಪೊಲೀಸರಲ್ಲಿ ಹೇಳಿಕೆ ನೀಡಿದ್ದಳು. ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.




