ಕಾಸರಗೋಡು: ಖಾಸಗಿ ಸಂಸ್ಥೆಗಳು ಮತ್ತು ಉದ್ಯಮಗಳ ವಿರುದ್ಧ ಕೆಂಪು ಬಾವುಟ ಹಾರಿಸುವ ಮೂಲಕ ಸಿಪಿಎಂ ಮತ್ತು ಇತರ ಎಡರಂಗ ಪಕ್ಷಗಳು ಅಭಿವೃದ್ಧಿಕಾರ್ಯಗಳಿಗೆ ಅಡ್ಡಿಪಡಿಸುತ್ತಿದ್ದ, ಅದೇ ಪಕ್ಷದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಇಂದು ಖಾಸಗಿ ಸಂಸ್ಥೆಗಳನ್ನು ಉದ್ಘಾಟಿಸುವ ಮೂಲಕ ರಾಜ್ಯ ಸರ್ಕಾರದ ಅಭಿವೃದ್ಧಿಯ ಬಗ್ಗೆ ಹೆಮ್ಮೆ ಪಡುತ್ತಿರುವುದು ಹಾಸ್ಯಾಸ್ಪದ ಎಂದು ಬಿಜೆಪಿ ಅಣಕವಾಡಿದೆ.
ಎಡರಂಗ ತನ್ನ ಮೊಂಡು ಧೋರಣೆ ಮೂಲಕ ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಪಡಿಸಿರುವುದನ್ನು ಕೇರಳದ ಜನತೆ ಎಂದಿಗೂ ಮರೆಯಲಾರರು. ಜಿಲ್ಲೆಯಲ್ಲಿ ಖಾಸಗಿ ಆಸ್ಪತ್ರೆಯೊಂದರ ಉದ್ಘಾಟನೆಗೆ ಸಮಯ ನಿಗದಿಪಡಿಸಿಕೊಂಡು ಆಗಮಿಸಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಸನಿಹದ ಉಕ್ಕಿನಡ್ಕದ ಸರ್ಕಾರಿ ವೈದ್ಯಕೀಯ ಕಾಲೇಜಿನತ್ತ ಮುಖಮಾಡದಿರುವುದು ಇಬ್ಬಗೆಯ ಧೋರಣೆಯಾಗಿದೆ. ಕೇಂದ್ರವು ಕೇರಳಕ್ಕೆ ಹಂಚಿಕೆ ಮಾಡಿರುವ 'ಏಮ್ಸ್' ಆಸ್ಪತ್ರೆಯನ್ನು ಕಾಸರಗೋಡು ಜಿಲ್ಲೆಯಲ್ಲಿ ಸ್ಥಾಪಿಸುವ ಬಗ್ಗೆ ಅಭಿಪ್ರಾಯಗಳನ್ನು ಸಮನ್ವಯಗೊಳಿಸಲು ಪ್ರಯತ್ನಿಸದ ಎಡರಂಗ ಮತ್ತು ಐಕ್ಯರಂಗ ನಾಯಕರು ಖಾಸಗಿ ಆಸ್ಪತ್ರೆಯ ಉದ್ಘಾಟನೆ ವೇದಿಕೆಯಲ್ಲಿ ಒಟ್ಟಾಗಿ ಕಾಣಿಸಿಕೊಂಡಿರುವುದು ಉಭಯರಂಗಗಳ ನೇತಾರರ ಇಚ್ಛಾಶಕ್ತಿಯ ಕೊರತೆಯನ್ನು ತೋರಿಸುತ್ತಿದೆ. ಕೇಂದ್ರವು ಅಭಿವೃದ್ಧಿಗೆ ತೊಡಕಾಗುತ್ತಿರುವುದಾಗಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಹೇಳಿಕೆ ಖಂಡನೀಯ. ಹನ್ನೆರಡು ವರ್ಷಗಳ ನಂತರವೂ, ಕಾಸರಗೋಡಿನಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜಿನ ನಿರ್ಮಾಣಕಾರ್ಯ ಪೂರ್ತಿಗೊಳಿಸಲಾಗದಿರುವುದಕ್ಕೆ ಕೇಂದ್ರ ಸರ್ಕಾರ ಜವಾಬ್ದಾರಿಯೇ ಎಂಬುದನ್ನು ಎಡರಂಗ ಸ್ಪಷ್ಟಪಡಿಸಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್ ಅಶ್ವಿನಿ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.




