ಮುಳ್ಳೇರಿಯ: ಅಡೂರು ಗ್ರಾಮದ ಚರಕಂಡದ ಅಸೀಮಾ ಅಗ್ನಿಹೋತ್ರಿ ಅವರು ಹೆಣ್ಣು ಮಕ್ಕಳಿಗೂ ವೇದಾಧ್ಯಯನದ ಅರ್ಹತೆಯ ಅವಕಾಶ ಇದೆ ಎಂಬ ನೆಲೆಯಲ್ಲಿ ಸ್ವತ: ಗಣಹೋಮದ ಪೌರೋಹಿತ್ಯವನ್ನು ವಹಿಸಿ ಸಾಬೀತು ಪಡಿಸಿದ್ದಾರೆ.
ಪುತ್ತೂರಿನ ಅಂಬಿಕಾ ಪದವಿಪೂರ್ವ ವಿದ್ಯಾಲಯದ ನೂತನ ಅಂತಸ್ತು ಲೋಕಾರ್ಪಣೆಯಲ್ಲಿ ಸೋಮವಾರ ಗಣಹೋಮದ ನೇತೃತ್ವ ವಹಿಸಿದ್ದರು. ಕುಬಣೂರು ವಿದ್ಯುತ್ ಇಲಾಖೆಯ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಅಗಿರುವ ಸತ್ಯನಾರಾಯಣ ಅಗ್ನಿಹೋತ್ರಿ - ರಂಜಿತಾ ಕುಮಾರಿ ದಂಪತಿಯ ಪುತ್ರಿಯಾದ ಅಸೀಮಾ, ಪುತ್ತೂರಿನ ಅಂಬಿಕಾ ಪದವಿಪೂರ್ವ ವಿದ್ಯಾಲಯದ ವಿದ್ಯಾರ್ಥಿನಿ. ಇವರ ಸಹೋದರ ಅದ್ವೈತ್ ಅಗ್ನಿಹೋತ್ರಿ ಅವರು ಕೂಡಾ ವೇದಾಧ್ಯಯನ ನಡೆಸಿದ್ದು, ಗಣಹೋಮವನ್ನು ಯಶಸ್ವಿಯಾಗಿ ನಿರ್ವಹಿಸುತ್ತಾರೆ. ಅಸೀಮಾ ಅವರು ಸುಳ್ಯ ಹಳೆಗೇಟು ಕೇಶವ ಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ಮುಖ್ಯಸ್ಥರಾದ ಪುರೋಹಿತ ನಾಗರಾಜ ಭಟ್ಟರಲ್ಲಿ ವೇದಾಧ್ಯಯನ ನಡೆಸಿದ್ದರು. ಈ ಮೂಲಕ ಹುಡುಗಿಯರಲ್ಲಿ ವೇದಾಧ್ಯಯನದ ಆಸಕ್ತಿ ಮೂಡಿಸುವ ಹಿನ್ನೆಲೆಯಲ್ಲಿ ಇಂತಹಾ ಪರಿವರ್ತನೆಯ ನಡೆಗೆ ಚಾಲನೆ ನೀಡಲಾಗಿದೆ. ಅಸೀಮಾ ಅವರು ಈ ಮೊದಲು ಅನೇಕ ಕಡೆಗಳಲ್ಲಿ ಗಣಹೋಮವನ್ನು ಯಶಸ್ವಿಯಾಗಿ ನಡೆಸಿ, ಹೊಸಾ ಸಾಧ್ಯತೆಗಳನ್ನು ಸೃಷ್ಟಿಸಿದ್ದಾರೆ.






