ತಮ್ಮ ಕಂಚಿನ ಕಂಠ ಹಾಗೂ ವಿಶಿಷ್ಟ ರಾಗ ಸಂಯೋಜನೆಯ ಮೂಲಕ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಕಲಾ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ಅವರ ಅಗಲಿಕೆಯಿಂದ ಯಕ್ಷಗಾನ ಲೋಕಕ್ಕೆ ಭಾರಿ ನಷ್ಟವಾಗಿದೆ.
ಪೌರಾಣಿಕ ಮತ್ತು ತುಳು ಪ್ರಸಂಗಗಳೆರಡರಲ್ಲೂ ತಮ್ಮ ಛಾಪು ಮೂಡಿಸಿರುವ ಇವರು, ಯಕ್ಷಗಾನ ಕ್ಷೇತ್ರದಲ್ಲಿ ಚಿರಪರಿಚಿತ ಹೆಸರು.
ಯಕ್ಷಗಾನ ಕ್ಷೇತ್ರದ ಹಿರಿಯ ಕಲಾವಿದರಾದ, ತೆಂಕುತಿಟ್ಟು ಪರಂಪರೆಯಲ್ಲಿ ತುಳು ಯಕ್ಷಗಾನವನ್ನು ಉತ್ತುಂಗಕ್ಕೇರಿಸಿದ ದಾಮೋದರ ಮಂಡೆಚ್ಚರ ಗರಡಿಯಲ್ಲಿ ಪಳಗಿದ ದಿನೇಶ್ ಅಮ್ಮಣ್ಣಾಯರು, ತಮ್ಮ ವೃತ್ತಿಜೀವನವನ್ನು ಪುತ್ತೂರು ಮೇಳದಲ್ಲಿ ಚಂಡೆ ಮತ್ತು ಮದ್ದಳೆ ವಾದಕರಾಗಿ ಆರಂಭಿಸಿದ್ದವರು. ಹಿಮ್ಮೇಳ ವಾದನದ ಅನುಭವದೊಂದಿಗೆ ಭಾಗವತಿಕೆಯತ್ತ ಹೊರಳಿದ ಅವರು, ತಮ್ಮದೇ ಆದ ವಿಶಿಷ್ಟ ಶೈಲಿಯನ್ನು ರೂಪಿಸಿಕೊಂಡವರಾಗಿದ್ದರು
ಅಮ್ಮಣ್ಣಾಯರು ಪೌರಾಣಿಕ ಪ್ರಸಂಗಗಳ ಜೊತೆಗೆ, ಅನೇಕ ತುಳು ಪ್ರಸಂಗಗಳ ಮೂಲಕವೂ ಜನಮಾನಸದಲ್ಲಿ ಅಚ್ಚಳಿಯದ ಪ್ರಭಾವ ಬೀರಿದ್ದರು. 'ಕಾಡಮಲ್ಲಿಗೆ', 'ಕಚ್ಚೂರ ಮಾಲ್ದಿ', 'ಪಟ್ಟದ ಪದ್ಮಲೆ' ಹಾಗೂ 'ಮಾನಿಷಾದ' ದಂತಹ ಪ್ರಸಂಗಗಳನ್ನು ತಮ್ಮ ಗಾಯನದಿಂದ ಜನಪ್ರಿಯಗೊಳಿಸಿದ ಕೀರ್ತಿ ಅವರದ್ದಾಗಿತ್ತು. ಅಲ್ಲದೆ, 'ಸತ್ಯಹರಿಶ್ಚಂದ್ರ' ಪ್ರಸಂಗದ ಹಾಡುಗಳಿಂದ ಗಮನ ಸೆಳೆದಿದ್ದರು.
ಅವರ ಅನುಪಮ ಕಲಾ ಸೇವೆಗೆ ಉಡುಪಿ ತುಳುಕೂಟವು ಪ್ರತಿಷ್ಠಿತ 'ಸಾಮಗ ಪ್ರಶಸ್ತಿ' ನೀಡಿ ಗೌರವಿಸಿತ್ತು. ಮಲ್ಪೆ ರಾಮದಾಸ ಸಾಮಗ, ಅಳಕೆ ರಾಮಯ್ಯ ರೈ, ಕೋಳ್ಯೂರು ರಾಮಚಂದ್ರ ರಾವ್ ಅವರಂತಹ ಮೇರು ಕಲಾವಿದರ ಒಡನಾಟದಲ್ಲಿ ತಮ್ಮ ಕಲಾ ಅನುಭವವನ್ನು ಶ್ರೀಮಂತಗೊಳಿಸಿಕೊಂಡ ಅಮ್ಮಣ್ಣಾಯರು, ಇತ್ತೀಚೆಗೆ ಎಡನೀರು ಮೇಳದಲ್ಲಿ ತಿರುಗಾಟ ಪೂರ್ಣಗೊಳಿಸಿ ವಿಶ್ರಾಂತ ಜೀವನ ನಡೆಸುತ್ತಿದ್ದರು. ಹವ್ಯಾಸಿ ಭಾಗವತರಾಗಿಯೂ ತಮ್ಮ ಕಲಾ ಸೇವೆಯನ್ನು ಮುಂದುವರೆಸಿದ್ದರು.
ದಾಮೋದರ ಮಂಡೆಚ್ಚರಿಂದ ಭಾಗವತಿಕೆಯ ಅಭ್ಯಾಸ, ಹರಿನಾರಾಯಣ ಬೈಪಾಡಿತ್ತಾಯರಿಂದ ಮೃದಂಗದ ಅಭ್ಯಾಸ ಮಾಡಿರುವ ಇವರು ಸಹೋದರಿಯಿಂದ ಸಂಗೀತದ ಅಭ್ಯಾಸವನ್ನು ಮಾಡಿದ್ದರು.. ಚಿಕ್ಕಪ್ಪ ವಿಷ್ಣು ಅಮ್ಮಣ್ಣಾಯರ ಪ್ರೋತ್ಸಾಹದೊಂದಿಗೆ ಉತ್ತೇಜಿತರಾದ ಅಮ್ಮಣ್ಣಾಯರು ಯಕ್ಷಗಾನದ ಕಲಾಸಾಧನೆಯಲ್ಲಿ ಪ್ರೌಡಿಮೆಯನ್ನು ಸಾಧಿಸಿದ್ದರು.
ಪುತ್ತೂರು ಮೇಳ, ಕರ್ನಾಟಕ ಮೇಳ, ಕದ್ರಿ ಮೇಳ, ಕುಂಟಾರು ಮೇಳ, ಎಡನೀರು ಮೇಳ ಹೀಗೆ ಮೇಳಗಳ ತಿರುಗಾಟದ ಹಿನ್ನೆಲೆ ಇದೆ. ಕರ್ನಾಟಕ ಮೇಳದಿಂದ ವರ್ಚಸ್ಸನ್ನು ಮೆರೆಸುತ್ತಾ ಬಂದ ಅಮ್ಮಣ್ಣಾಯರು ಈವರೆಗೂ ತಮ್ಮ ವರ್ಚಸ್ಸನ್ನು ಉಳಿಸಿ ಬೇಡಿಕೆಯ ಕಲಾವಿದರಾಗಿದ್ದರು.
ತುಳು ಮತ್ತು ಕನ್ನಡ ಪ್ರಸಂಗಗಳನ್ನು ಸಮರ್ಥವಾಗಿ ಆಡಿಸಬಲ್ಲ ಇವರು ರಾಗ ಸಂಯೋಜನೆಯಲ್ಲಿ ಪಳಗಿದವರಾಗಿದ್ದಾರೆ. ಕಂಠ ಮಾಧುರದಿಂದ ಪ್ರೇಕ್ಷಕರ ಮನವನ್ನು ತಣಿಸುವ ಪ್ರೌಢ' ಭಾಗವತರು ಅಮ್ಮಣ್ಣಾಯರಾಗಿದ್ದರು.ಕೃಷಿಕರಾಗಿದ್ದ ಇವರು ಪತ್ನಿ ಶ್ರೀಮತಿ ಸುಧಾ, ಮಕ್ಕಳಾದ ಅಕ್ಷತಾ ಮತ್ತು ಅಮಿತಾ ಅವರನ್ನು ಅಗಲಿದ್ದಾರೆ.
ಭಾಗವತಿಕೆಯ ಇವರ ಕಲಾಸಾಧನೆಗೆ ಪ್ರತಿಫಲವಾಗಿ 40 ಕ್ಕೂ ಮಿಕ್ಕಿ ಸಂಮ್ಮಾನಗಳು ಸಂದಿವೆ. ಮುಂಬಯಿ, ಬೆಂಗಳೂರು, ಮಂಗಳೂರು ಸೇರಿದಂತೆ ಎಡನೀರು, ಉಡುಪಿ ಮೊದಲಾದೆಡೆಯಲ್ಲಿ ಅಭಿಮಾನಿಗಳಿಂದ ಗೌರವ ಪುರಸ್ಕಾರಕ್ಕೆ ಒಳಗಾಗಿದ್ದಾರೆ.




