ಮೈಸೂರು: ವಿಜಯದಶಮಿ ದಿನದ ವಿಶ್ವವಿಖ್ಯಾತ ಜಂಬೂಸವಾರಿ ಮೆರವಣಿಗೆಗೆ ಗುರುವಾರ ಸಂಜೆ ಶುಭ ಕುಂಭ ಲಗ್ನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೇರಿದಂತೆ ಗಣ್ಯರು ಚಿನ್ನದಂಬಾರಿಯಲ್ಲಿ ವಿರಾಜಮಾನಳಾದ ನಾಡಿನ ಅಧಿದೇವತೆ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದ್ದಾರೆ.
ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡುವ ವೇಳೆ ಶಿಷ್ಟಾಚಾರದಂತೆ ಮುಖ್ಯಮಂತ್ರಿ, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ, ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ, ನಗರ ಪೊಲೀಸ್ ಆಯುಕ್ತರು ಹಾಗೂ ಸಂಸದರೂ ಆದ ರಾಜವಂಶಸ್ಥ, ಸಂಸದ ಯದು ವೀರ್‌ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ವೇದಿಕೆ ಮೇಲೇರಿ ಅಂಬಾರಿಯಲ್ಲಿ ಆಸೀನಳಾದ ದೇವಿಗೆ ಪುಷ್ಪಾರ್ಚನೆ ಮಾಡಿದ್ದಾರೆ.
ಜಂಬೂ ಸವಾರಿಯಲ್ಲಿ ಕ್ಯಾಪ್ಟನ್ ಅಭಿಮನ್ಯು ಸತತ 6ನೇ ಬಾರಿಗೆ 750 ಕೆಜಿ ತೂಕದ ಚಿನ್ನದ ಅಂಬಾರಿ ಹೊತ್ತಿದ್ದಾನೆ. ನಿಶಾನೆ ಆನೆಯಾಗಿ ಧನಂಜಯ ಹಾಗೂ ನೌಪತ್ ಆನೆಯಾಗಿ ಗೋಪಿ ಇವೆ. ಇಡೀ ಮೆರವಣಿಗೆಯನ್ನು ಧನಂಜಯ ಮುನ್ನಡೆಸಿದರೆ, ಹಿಂದೆ ಗೋಪಿ ಸಾಗುತ್ತಿದ್ದಾನೆ.
ನಾಡಿನ ವಿವಿಧೆಡೆಯಿಂದ ಲಕ್ಷಾಂತರ ಜನರು ಜಂಜೂಸವಾರಿ ವೀಕ್ಷಣೆಗೆ ಆಗಮಿಸುವುದರಿಂದ ಯಾವುದೇ ಅಹಿತಕರ ಘಟನೆ ನಡೆಯದಂತೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಎರಡು ಹಂತದಲ್ಲಿ ಬಿಗಿ ಬಂದೋಬಸ್ತ್ ನಿಯೋಜಿಸಲಾಗಿದೆ.
ರಾಜ್ಯದ ವಿವಿಧೆಡೆಯಿಂದ 6184 ಅಧಿಕಾರಿ, ಸಿಬ್ಬಂದಿ ನಿಯೋಜಿಸಲಾಗಿದೆ. 5 ಎಸ್ಪಿ, 30 ಡಿವೈಎಸ್ಪಿ, 40 ಇನ್ಸ್‌ಪೆಕ್ಟರ್, 35 ಕೆಎಸ್‌ಆರ್‌ಪಿ ತುಕಡಿ, 15 ಸಿಆರ್‌ತುಕಡಿ, 29 ಎಎಸ್ಸಿ ತಂಡ, 1 ಆರ್‌ಎಎಫ್ ಹಾಗೂ 1700 ಹೋಮ್ ಗಾರ್ಡ್‌ಗಳನ್ನು ನಿಯೋಜನೆ ಮಾಡಿಕೊಳ್ಳಲಾಗಿದೆ. ಜಂಬೂಸವಾರಿ ಸಾಗುವ ಮಾರ್ಗದಲ್ಲಿ ಸಿಸಿ ಕೆಮರಾಗಳ ಕಣ್ಗಾಗವಲು, ಚಿನ್ನದ ಅಂಬಾರಿ ಹೊತುಹೆಜ್ಜೆ ಹಾಕಲಿರುವ ಅಭಿಮನ್ಯು ಆನೆ ಸುತ್ತ ಜನಸಂದಣಿ ಉಂಟಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ.




