ಮುಂಬೈ: ಹಿರಿಯ ಗಾಂಧಿವಾದಿ, ಸ್ವಾತಂತ್ರ್ಯ ಹೋರಾಟಗಾರ ಡಾ. ಗುಣವಂತರಾಯ್ ಗಣಪತ್‌ಲಾಲ್ ಪಾರಿಖ್ ಅವರು ಗುರುವಾರ ನಿಧನರಾಗಿದ್ದಾರೆ. ಪಾರಿಖ್ ಅವರು ಸ್ವಾತಂತ್ರ್ಯ ಹೋರಾಟಗಾರರ ಕೊನೆಯ ಪೀಳಿಗೆಯವರಲ್ಲಿ ಒಬ್ಬರಾಗಿದ್ದರು.
ಗುಣವಂತರಾಯ್ ಗಣಪತ್‌ಲಾಲ್ ಪಾರಿಖ್ ಅವರು ಜಿಜಿ ಪಾರಿಖ್.ಜಿಜಿ ಎಂದೇ ಪ್ರಸಿದ್ಧರಾಗಿದ್ದರು. ಪಾರಿಖ್ ಅವರಿಗೆ 101 ವರ್ಷ ವಯಸ್ಸಾಗಿತ್ತು. 2023ರ ಡಿಸೆಂಬರ್ 30ರಂದು ಅವರಿಗೆ 100 ವರ್ಷ ತುಂಬಿತ್ತು.
ಪಾರಿಖ್ ಮೃತದೇಹವನ್ನು ಮುಂಬೈಯಲ್ಲಿರುವ ಸರ್ಕಾರಿ ಜೆಜೆ ಆಸ್ಪತ್ರೆಗೆ ದಾನ ಮಾಡಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ದೇಶದ ಸ್ವಾತಂತ್ರ್ಯ ಹೋರಾಟ, ಗೋವಾ ವಿಮೋಚನಾ ಚಳವಳಿ, ಸಂಯುಕ್ತ ಮಹಾರಾಷ್ಟ್ರ ಚಳವಳಿಯಲ್ಲಿ ಭಾಗವಹಿಸಿ ತುರ್ತು ಪರಿಸ್ಥಿತಿಯ ವಿರುದ್ಧ ಪಾರಿಖ್ ಅವರು ಪ್ರತಿಭಟನೆ ನಡೆಸಿದ್ದರು.
ಮೂಲತಃ ಸಮಾಜವಾದಿಯಾಗಿದ್ದ ಪಾರಿಖ್ ಅವರು 1942ರಲ್ಲಿ ಕ್ವಿಟ್ ಇಂಡಿಯಾ ಚಳುವಳಿ ಮತ್ತು 1975ರಲ್ಲಿ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿದ್ದರು.
1951-52ರಲ್ಲಿ ಭಾರತದ ಮೊದಲ ಸಾರ್ವತ್ರಿಕ ಚುನಾವಣೆಯ ನಂತರ ಎಲ್ಲಾ ಚುನಾವಣೆಗಳಲ್ಲೂ ಪಾರಿಖ್ ಮತ ಚಲಾಯಿಸಿದ್ದಾರೆ.
ಪಾರಿಖ್ ಅವರು 1961ರಲ್ಲಿ ಸ್ಥಾಪನೆಯಾದ ರಾಯಗಢ ಜಿಲ್ಲೆಯ ತಾರಾದಲ್ಲಿರುವ ಯೂಸುಫ್ ಮೆಹರಲ್ಲಿ ಕೇಂದ್ರದ ಅಧ್ಯಕ್ಷರಾಗಿದ್ದರು. ಈ ಸಂಸ್ಥೆ ಆರೋಗ್ಯ, ಶಿಕ್ಷಣ, ಮಹಿಳೆಯರು ಮತ್ತು ಆದಿವಾಸಿಗಳ ಸಬಲೀಕರಣ, ಕೃಷಿ ಕೌಶಲ್ಯ ಅಭಿವೃದ್ಧಿ, ಕೃಷಿಯೇತರ ಉದ್ಯೋಗ ಸೃಷ್ಟಿ ಮತ್ತು ವಿಪತ್ತು ಪರಿಹಾರ ಪ್ರಯತ್ನಗಳನ್ನು ಒಳಗೊಂಡ ವೈವಿಧ್ಯಮಯ ಲೋಕೋಪಕಾರಿ ಪ್ರಯತ್ನಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ.
ಕಳೆದ ಕೆಲವು ವರ್ಷಗಳಿಂದ ಗಾಲಿಕುರ್ಚಿಯಲ್ಲಿ ಓಡಾಟ ನಡೆಸುತ್ತಿದ್ದ ಪಾರಿಖ್ ಅವರು ವಾರಕ್ಕೊಮ್ಮೆ ವೈಎಂಸಿಗೆ ಭೇಟಿ ನೀಡುತ್ತಿದ್ದರು.




