ಲೇಹ್: ಲೇಹ್ ಪಟ್ಟಣದಲ್ಲಿ ಸೆಪ್ಟೆಂಬರ್ 24ರಂದು ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ನಾಲ್ಕು ಮಂದಿ ಮೃತಪಟ್ಟು, ಸಾಕಷ್ಟು ಜನರು ಗಾಯಗೊಂಡಿದ್ದರು. ಈ ಕುರಿತು ನ್ಯಾಯಾಂಗ ತನಿಖೆಗೆ ಆದೇಶಿಸಲಾಗಿದ್ದು, ನಾಲ್ಕು ವಾರಗಳಲ್ಲಿ ಮುಕ್ತಾಯವಾಗಲಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ತನಿಖೆಗೆ ಆದೇಶಿಸಿರುವ ಲೇಹ್ ಡೆಪ್ಯುಟಿ ಕಮಿಷನರ್ ಅವರು, ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಮುಕುಲ್ ಬೆನಿವಾಲ್ ಅವರನ್ನು ತನಿಖಾಧಿಕಾರಿಯಾಗಿ ನೇಮಿಸಿದ್ದಾರೆ.
ಲಡಾಖ್‌ಗೆ ರಾಜ್ಯ ಸ್ಥಾನಮಾನ ಹಾಗೂ ಸಂವಿಧಾನದ 6ನೇ ಪರಿಚ್ಛೇದದ ಅಡಿಯಲ್ಲಿ ಸೇರಿಸಬೇಕು ಎಂದು ಒತ್ತಾಯಿಸಿ ಕಳೆದ ತಿಂಗಳು ನಡೆಯುತ್ತಿದ್ದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತ್ತು.
ತನಿಖೆಗೆ ನೆರವಾಗುವ ಯಾವುದೇ ಮಾಹಿತಿ ಹೊಂದಿರುವ ಸಾರ್ವಜನಿಕರು ಅಕ್ಟೋಬರ್ 4ರಿಂದ 18ರವರೆಗೆ ಕಚೇರಿ ಸಮಯದಲ್ಲಿ ತಮ್ಮನ್ನು ಭೇಟಿಯಾಗಬಹುದು ಎಂದು ಬೆನಿವಾಲ್ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ನ್ಯಾಯಯುತ ಮತ್ತು ಪಾರದರ್ಶಕ ತನಿಖೆಗೆ ಸಹಕರಿಸುವಂತೆಯೂ ಮನವಿ ಮಾಡಿದ್ದಾರೆ.




