HEALTH TIPS

ಸಿಜೆಐ ಗವಾಯಿ ಅವರ ಮುಖದ ಮೇಲೆ ಉಗುಳಿ, ಕಾರನ್ನು ತಡೆಯಿರಿ: ಖಜುರಾಹೊ ತೀರ್ಪಿನ ನಂತರ ಪ್ರಚೋದನಾಕಾರಿ ಹೇಳಿಕೆ ನೀಡಿದ್ದ ಆರೆಸ್ಸೆಸ್‌ನ ಟಿ.ಜಿ.ಮೋಹನದಾಸ್

ತಿರುವನಂತಪುರಂ: ಆರೆಸ್ಸೆಸ್ ಚಿಂತಕ ಮತ್ತು ಬಿಜೆಪಿ ಬೌದ್ಧಿಕ ವಿಭಾಗದ ಮಾಜಿ ಸಂಚಾಲಕ ಟಿ.ಜಿ.ಮೋಹನದಾಸ್ ಅವರು ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಮುಖಕ್ಕೆ ಉಗುಳಿ, ಅವರ ಕಾರನ್ನು ತಡೆಯಿರಿ ಎಂದು ಪ್ರಚೋದನಾತ್ಮಕ ಹೇಳಿಕೆ ನೀಡಿರುವ ಬಗ್ಗೆ ವರದಿಯಾಗಿದೆ.

ಮಧ್ಯಪ್ರದೇಶದ ಖಜುರಾಹೊ ದೇವಾಲಯ ಸಂಕೀರ್ಣದಲ್ಲಿ ವಿಷ್ಣುವಿನ ಹಾನಿಗೊಳಗಾದ ವಿಗ್ರಹವನ್ನು ಪುನಃಸ್ಥಾಪನೆ ಕೋರಿ ಸಲ್ಲಿಸಿದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಪೀಠ ತಿರಸ್ಕರಿಸಿತ್ತು. ಇದರ ಬೆನ್ನಲ್ಲೆ ಟಿ.ಜಿ.ಮೋಹನದಾಸ್ ಅವರು ಈ ಹೇಳಿಕೆ ನೀಡಿದ್ದರು.

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಮೇಲೆ ವಕೀಲ ರಾಕೇಶ್ ಕಿಶೋರ್ ಶೂ ಎಸೆದ ಘಟನೆಗೆ ಕೆಲವು ದಿನಗಳ ಮೊದಲು ಅಂದರೆ ಸೆಪ್ಟೆಂಬರ್ 30ರಂದು ʼಪತ್ರಿಕಾʼ ಎಂಬ ಯೂಟ್ಯೂಬ್ ಚಾನೆಲ್ ನಲ್ಲಿ ʼGod Punished Gavaiʼ ಎಂಬ ಶೀರ್ಷಿಕೆಯ ವೀಡಿಯೊದಲ್ಲಿ ಅವರು ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.

ʼಮುಖ್ಯ ನ್ಯಾಯಮೂರ್ತಿಯ ಮುಖದ ಮೇಲೆ ಉಗುಳಿರಿ, ಅದಕ್ಕಾಗಿ ಗರಿಷ್ಠ ಆರು ತಿಂಗಳ ಜೈಲು ಶಿಕ್ಷೆಯಷ್ಟೇ ಇದೆ. ಆದರೆ ಈ ರೀತಿ ಮಾಡಲು ಯಾವುದೇ ಹಿಂದೂ ಕೂಡ ಸಿದ್ದರಿಲ್ಲ. ಮುಖ್ಯ ನ್ಯಾಯಮೂರ್ತಿಗಳ ವಾಹನವನ್ನು ತಡೆದರೆ ಕೂಡ ಗಂಭೀರವಾದ ಶಿಕ್ಷೆಯೇನೂ ಆಗುವುದಿಲ್ಲ. ಬಂಧನಕ್ಕೊಳಗಾದವರನ್ನು ಸಂಜೆಯೊಳಗೆ ಬಿಡುಗಡೆ ಮಾಡಲಾಗುತ್ತದೆʼ ಎಂದು ಹೇಳಿದ್ದರು.

ಸೆಪ್ಟೆಂಬರ್ 16ರಂದು ಖಜುರಾಹೊ ಜವರಿ ದೇವಸ್ಥಾನಕ್ಕೆ ಸಂಬಂಧಿಸಿದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ವಜಾಗೊಳಿಸುವಾಗ ಮುಖ್ಯ ನ್ಯಾಯಮೂರ್ತಿ ಗವಾಯಿ ಮತ್ತು ನ್ಯಾಯಮೂರ್ತಿ ಆಗಸ್ಟೀನ್ ಜಾರ್ಜ್ ಮಸೀಹ್ ಅವರ ಪೀಠವು, ಈ ಅರ್ಜಿಯನ್ನು ಪ್ರಚಾರ ಪಡೆಯುವ ಉದ್ದೇಶದಿಂದ ಸಲ್ಲಿಸಲಾಗಿದೆ. ಈ ವಿಷಯವು ಸುಪ್ರೀಂ ಕೋರ್ಟ್ ಅಲ್ಲ, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ (ASI) ವ್ಯಾಪ್ತಿಗೆ ಬರುತ್ತದೆ ಎಂದು ಹೇಳಿದ್ದರು.

ʼನೀವು ವಿಷ್ಣುವಿನ ಭಕ್ತರೆಂದು ಹೇಳುತ್ತೀರಿ, ದೇವರ ಬಳಿ ಹೋಗಿ ದೇವರೇ ಏನಾದರು ಮಾಡುವಂತೆ ಪ್ರಾರ್ಥಿಸಿ. ಇದು ಪುರಾತತ್ವ ಇಲಾಖೆಯ ಅಧೀನದಲ್ಲಿರುವ ಸ್ಥಳ. ಅನುಮತಿ ನೀಡುವುದು ಪುರಾತತ್ವ ಇಲಾಖೆಗೆ ಮಾತ್ರ ಸಾಧ್ಯʼ ಎಂದು ನ್ಯಾಯಮೂರ್ತಿ ಗವಾಯಿ ಅರ್ಜಿದಾರರಿಗೆ ಹೇಳಿದ್ದರು.

ಸಿಜೆಐ ಅವರ ಹೇಳಿಕೆ ಹಿಂದುತ್ವವಾದಿಗಳ ಆಕ್ರೋಶಕ್ಕೆ ಕಾರಣವಾಗಿತ್ತು.

ಗವಾಯಿ ಅವರು ವಿಷ್ಣುವಿಗೆ ಅಗೌರವ ವ್ಯಕ್ತಪಡಿಸಿದ್ದಾರೆ. ಅವರು ಕ್ಷಮೆಯಾಚಿಸಬೇಕು ಮತ್ತು ಅವರ ಮಾತುಗಳನ್ನು ಹಿಂತೆಗೆದುಕೊಳ್ಳಬೇಕು ಎಂದು ಮೋಹನದಾಸ್ ಆಗ್ರಹಿಸಿದ್ದರು.

ಅವರು ವಿಷ್ಣುವನ್ನು ಅವಮಾನಿಸಿದ್ದಾರೆ. ಆದ್ದರಿಂದ ಅವರು ತಮ್ಮ ತಪ್ಪನ್ನು ಒಪ್ಪಿಕೊಳ್ಳಬೇಕು ಎಂದು ಮೋಹನದಾಸ್ ವೀಡಿಯೊದಲ್ಲಿ ಹೇಳಿದ್ದಾರೆ. ಮುಖ್ಯ ನ್ಯಾಯಮೂರ್ತಿಗಳಿಗೆ ಗೌರವ ತೋರಿಸುವುದು ಎಂದರೆ ದೇವದೂಷಣೆಯ ಹೇಳಿಕೆಗಳನ್ನು ಸಹಿಸಿಕೊಳ್ಳುವುದು ಎಂದಲ್ಲ ಎಂದೂ ಹೇಳಿದ್ದರು.

ವಿವಾದದ ನಂತರ ರಾಷ್ಟ್ರ ದ್ರೌಪದಿ ಮುರ್ಮು ಅವರನ್ನು ಸಿಜೆಐ ಭೇಟಿಯಾಗಿರುವುದನ್ನು ಮೋಹನದಾಸ್ ಅಣಕಿಸಿದ್ದಾರೆ. ಸಾಮಾಜಿಕ ಜಾಲತಾಣಗಳ ಬಳಕೆದಾರರು ಗವಾಯಿ ಫೋಟೋದಲ್ಲಿ ಧರಿಸಿದ್ದ ಶೂ ಬೆಲೆ 80,000 ಎಂಬುದನ್ನು ಕಂಡು ಹಿಡಿದಿದ್ದಾರೆ ಎಂದು ಟೀಕಿಸಿದ್ದರು.

"ಯಾರೂ ಗವಾಯಿಯನ್ನು ಗೌರವಿಸದಿದ್ದರೂ, ಹಿಂದೂ ಸಮಾಜಕ್ಕೆ ಏನೂ ಆಗುವುದಿಲ್ಲ. ಆದರೆ ಮುಖ್ಯ ನ್ಯಾಯಾಧೀಶರಾಗಿ, ಅವರು ಅಂತಹ ಅಸಂಬದ್ಧ ಮಾತುಗಳನ್ನು ಹೇಳದಿರುವ ಸಭ್ಯತೆಯನ್ನು ಹೊಂದಿರಬೇಕಿತ್ತು. ಅದು ನಾಲಿಗೆಯ ಎಡವಟ್ಟಾಗಿದ್ದರೆ, ಅವರು ಕ್ಷಮೆಯಾಚಿಸಬೇಕು. ಅವರ ಗೌರವ ಅಥವಾ ಅವರ ದುರಹಂಕಾರ ನಮಗೆ ಅಗತ್ಯವಿಲ್ಲʼ ಎಂದು ಮೋಹನದಾಸ್ ಹೇಳಿದ್ದಾರೆ.

ಮಧ್ಯ ಪ್ರದೇಶದಲ್ಲಿರುವ ಖಜುರಾಹೊ ಜವರಿ ದೇವಸ್ಥಾನದಲ್ಲಿ ವಿಷ್ಣು ವಿಗ್ರಹ ದುರಸ್ತಿ ಮಾಡಲು ಅರ್ಜಿದಾರರು ಬಯಸಿದ್ದರು. ಇದು ನ್ಯಾಯಾಂಗದ ವ್ಯಾಪ್ತಿಗೆ ಒಳಪಡುವುದಿಲ್ಲ, ಬದಲಾಗಿ ASI ವ್ಯಾಪ್ತಿಯಲ್ಲಿದೆ ಎಂದು ಸುಪ್ರೀಂ ಕೋರ್ಟ್ ಅರ್ಜಿಯನ್ನು ತಿರಸ್ಕರಿಸಿತ್ತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries