ಕೌಲಲಾಂಪುರ: ಇತ್ತೀಚೆಗೆ ಎರಡೂ ರಾಷ್ಟ್ರಗಳ ನಡುವೆ ತೀವ್ರ ಸ್ವರೂಪಕ್ಕೆ ತಿರುಗಿದ್ದ ಮಿಲಿಟರಿ ಸಂಘರ್ಷವನ್ನು ಕೊನೆಗೊಳಿಸುವ ಐತಿಹಾಸಿಕ ಒಪ್ಪಂದಕ್ಕೆ ಥೈಲ್ಯಾಂಡ್ ಮತ್ತು ಕಂಬೋಡಿಯಾದ ನಾಯಕರು ರವಿವಾರ ಸಹಿ ಹಾಕಿದ್ದಾರೆ.
ಕೌಲಲಾಂಪುರದಲ್ಲಿ ನಡೆಯುವ 47ನೇ ಆಗ್ನೇಯ ಏಶ್ಯಾ ರಾಷ್ಟ್ರಗಳ ಸಂಘ(ಆಸಿಯಾನ್) ಶೃಂಗಸಭೆಯ ನೇಪಥ್ಯದಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಗಿದ್ದು ಎರಡೂ ದೇಶಗಳ ನಡುವೆ ಮಧ್ಯಸ್ಥಿಕೆ ವಹಿಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಉಪಸ್ಥಿತರಿದ್ದರು ಎಂದು ವರದಿಯಾಗಿದೆ.
ದಕ್ಷಿಣ ಏಶ್ಯಾದ ಎಲ್ಲಾ ಜನತೆಗೆ ಇದು ಮಹತ್ವದ ದಿನವಾಗಿದೆ ಎಂದು ಟ್ರಂಪ್ ಶ್ಲಾಘಿಸಿದ್ದಾರೆ. ಅಧಿಕ ಸುಂಕದ ಬೆದರಿಕೆಯೊಡ್ಡಿದ ಹಿನ್ನೆಲೆಯಲ್ಲಿ ಎರಡೂ ರಾಷ್ಟ್ರಗಳು ಶಾಂತಿ ಒಪ್ಪಂದಕ್ಕೆ ಸಮ್ಮತಿಸಿವೆ ಎಂದು ಶ್ವೇತಭವನದ ಮೂಲಗಳು ಹೇಳಿವೆ. ಒಪ್ಪಂದದ ಪ್ರಕಾರ, ಥೈಲ್ಯಾಂಡ್ ಬಂಧಿಸಿರುವ ಕಂಬೋಡಿಯಾದ 18 ಯೋಧರು ಬಿಡುಗಡೆಗೊಳ್ಳಲಿದ್ದಾರೆ ಮತ್ತು ಎರಡೂ ದೇಶಗಳು ಗಡಿ ಪ್ರದೇಶದಿಂದ ಭಾರೀ ಶಸ್ತ್ರಾಸ್ತ್ರಗಳನ್ನು ತೆರವುಗೊಳಿಸಲಿವೆ.




