ಕಾಸರಗೋಡು: ದೇಶಕ್ಕೆ ಎಲ್ಲಾ ವರ್ಗದ ಜನರನ್ನು ಒಳಗೊಂಡ ಸಮಗ್ರ ಅಭಿವೃದ್ಧಿ ಇಂದಿನ ಅನಿವಾರ್ಯತೆಯಾಗಿದೆ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ತಿಳಿಸಿದ್ದಾರೆ. ಅವರು ಕಿನನೂರು ಕರಿಂದಲಂನಲ್ಲಿ ಅಭಿವೃದ್ಧಿ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ಕೇರಳ ಸರ್ಕಾರವು ಆರೋಗ್ಯ, ಶಿಕ್ಷಣ ಮತ್ತು ಮೂಲಸೌಕರ್ಯ ಅಭಿವೃದ್ಧಿ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಅಭಿವೃದ್ಧಿ ಚಟುವಟಿಕೆಗಳನ್ನು ನಡೆಸುತ್ತಾ ಬರುತ್ತಿದ್ದು, ಉತ್ತಮ ಪ್ರಗತಿ ದಾಖಲಿಸಿಕೊಂಡಿದ್ದು, ಇತರ ರಾಜ್ಯಗಳಿಗೆ ಮಾದರಿಯಾಗಿದೆ. ಸ್ಥಳೀಯಾಡಳಿತ ಸಂಸ್ಥೆಗಳ ನೇತೃತ್ವದಲ್ಲಿ ಜನರ ಅಭಿವೃದ್ಧಿಗೆ ಅಗತ್ಯವಾದ ಅನೇಕ ಚಟುವಟಿಕೆಗಳನ್ನು ಕೈಗೊಳ್ಳಲಾಗಿದೆ. ಕಿನನೂರು ಕರಿಂದಲಂನಲ್ಲಿ ಕಳೆದ ಐದು ವರ್ಷಗಳಲ್ಲಿ ಗ್ರಾಮ ಪಂಚಾಯಿತಿ ಮಾತ್ರ ಸುಮಾರು 20 ಕೋಟಿ ರೂ.ಗಳ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿರುವುದು ಶ್ಲಾಘನೀಯ ಎಂದು ತಿಳಿಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಟಿ.ಕೆ.ರವಿ ಅಧ್ಯಕ್ಷತೆ ವಹಿಸಿದ್ದರು. ಪರಪ್ಪ ಬ್ಲಾಕ್ ಪಂಚಾಯತ್ ಅಧ್ಯಕ್ಷೆ ಎಂ.ಲಕ್ಷ್ಮಿ ಅವರು ಪಂಚಾಯಿತಿಯ ಅಭಿವೃದ್ಧಿ ಸಾಧನೆಗಳ ಪ್ರಗತಿ ವರದಿಯನ್ನುಬಿಡುಗಡೆಗೊಳಿಸಿದರು. ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಮಹನೀಯರನ್ನು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಸನ್ಮಾನಿಸಿದರು.
ಜಿಪಂ ಸ್ಥಾಯೀ ಸಮಿತಿ ಅಧ್ಯಕ್ಷೆ ಕೆ. ಶಕುಂತಲಾ, ಪರಪ್ಪ ಬ್ಲಾಕ್ ಪಂಚಾಯಿತಿ ಉಪಾಧ್ಯಕ್ಷ ಕೆ.ಭೂಪೇಶ್, ಕಿನಾನೂರು ಕರಿಂದಲಂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಎಚ್.ಅಬ್ದುಲ್ ನಾಸರ್, ಕ್ಷೇಮಾಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ಶೈಜಮ್ಮ ಬೆನ್ನಿ, ಆರೋಗ್ಯ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ವಿ. ಅಜಿತ್ ಕುಮಾರ್, ವಾರ್ಡ್ ಸದಸ್ಯ ಕೆ.ವಿ. ಬಾಬು, ಯೋಜನಾ ಸಮಿತಿ ಉಪಾಧ್ಯಕ್ಷ ಪಾರಕೋಲ್ ರಾಜನ್, ಕಿನಾನೂರು ಕರಿಂದಲಂ ಸಿಡಿಎಸ್ ಅಧ್ಯಕ್ಷೆ ಉಷಾರಾಜು ಉಪಸ್ಥಿತರಿದ್ದರು. ಉಪಾಧ್ಯಕ್ಷ ತಾ.ಪಂ. ಶಾಂತಾ ಸ್ವಾಗತಿಸಿದರು. ಕಿನಾನೂರು ಕರಿಂದಲಂ ಗ್ರಾಮ ಪಂಚಾಯಿತಿ ಸಹಾಯಕ ಕಾರ್ಯದರ್ಶಿ ಸಜೀಂದ್ರನ್ ಪುದಿಯಾಪುರ ವಂದಿಸಿದರು.


