HEALTH TIPS

ಶಬರಿಮಲೆ ಚಿನ್ನ ನಾಪತ್ತೆ ಪ್ರಕರಣ: ಹಿರಿಯ ಅಧಿಕಾರಿ ಅಮಾನತು

ತಿರುವನಂತಪುರಂ: ಶಬರಿಮಲೆ ಅಯ್ಯಪ್ಪ ದೇವಸ್ಥಾನದ ಚಿನ್ನ ನಾಪತ್ತೆ ಪ್ರಕರಣದಲ್ಲಿ ದೇವಸ್ವಂ ಉಪ ಆಯುಕ್ತ (ಹರಿಪಾದ) ಬಿ. ಮುರಾರಿ ಬಾಬು ಅವರನ್ನು ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಅಮಾನತುಗೊಳಿಸಿದೆ.


ದೇಗುಲದಲ್ಲಿ ಆಡಳಿತಾಧಿಕಾರಿಯಾಗಿದ್ದ ಬಾಬು, 2019ರ ಜುಲೈ 17ರಂದು ಶಬರಿಮಲೆ ಕಾರ್ಯನಿರ್ವಾಹಕ ಅಧಿಕಾರಿಗೆ ವರದಿ ಸಲ್ಲಿಸಿ, ದೇಗುಲದ ಪ್ರವೇಶದ್ವಾರದ ಎರಡೂ ಬದಿ ಇದ್ದ ಚಿನ್ನಲೇಪಿತ ದ್ವಾರಪಾಲಕ ಮೂರ್ತಿಗಳನ್ನು ತಾಮ್ರ ಲೇಪಿತ ಮೂರ್ತಿಗಳೆಂದು ತಪ್ಪಾಗಿ ನಮೂದಿಸುವ ಮೂಲಕ ಕರ್ತವ್ಯ ಲೋಪ ಎಸಗಿದ್ದಾರೆ ಎಂದು ಟಿಡಿಬಿ ಆರೋಪಿಸಿದೆ.

ಆಲಪ್ಪುಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಾಬು ಅವರು, ಈ ಆರೋಪವನ್ನು ನಿರಾಕರಿಸಿದ್ದು, 'ಟಿಡಿಬಿ ಯಾವುದೇ ವಿವರಣೆ ಕೇಳಿಲ್ಲ' ಎಂದಿದ್ದಾರೆ.

'ಉದ್ಯಮಿ ವಿಜಯ್‌ ಮಲ್ಯ ಪ್ರಾಯೋಜಕತ್ವದಲ್ಲಿ 1998ರಲ್ಲಿ ದೇವಸ್ಥಾನದ ಗರ್ಭಗುಡಿಗೆ ಚಿನ್ನದ ಲೇಪನ ಮಾಡಲಾಗಿತ್ತು. ಆದರೆ, ಪ್ರವೇಶ ದ್ವಾರದ ಎರಡೂ ಬದಿಯಲ್ಲಿದ್ದ ಮೂರ್ತಿಗಳಿಗೆ ತೆಳುವಾದ ಚಿನ್ನದ ಲೇಪನ ಮಾಡಲಾಗಿತ್ತು. ಆದ್ದರಿಂದ ಅದು ಸವೆದು ತಾಮ್ರದ ತಟ್ಟೆ ಮಾತ್ರ ಉಳಿದಿತ್ತು. ಮೂಲ ಲೋಹವು ತಾಮ್ರವಾಗಿದ್ದರಿಂದ ತಾಮ್ರದ ಮೂರ್ತಿಯೆಂದೇ ವರದಿ ಸಲ್ಲಿಸಿದ್ದೆ' ಎಂದು ಹೇಳಿದ್ದಾರೆ.

ಈ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ ರಚಿಸುವಂತೆ ಕೇರಳ ಹೈಕೋರ್ಟ್‌ ಸೋಮವಾರ ನಿರ್ದೇಶನ ನೀಡಿತ್ತು.

2019ರಲ್ಲಿ ದ್ವಾರಪಾಲಕ ಮೂರ್ತಿಗಳಿಂದ ಚಿನ್ನ ಲೇಪಿತ ಕವಚವನ್ನು ಮೂರ್ತಿಯಿಂದ ಬೇರ್ಪಡಿಸಿ ಹೊಸದಾಗಿ ಚಿನ್ನ ಲೇಪನಕ್ಕೆಂದು ಚೆನ್ನೈನ ಕಂಪನಿಯೊಂದಿಗೆ ನೀಡಲಾಗಿತ್ತು. ಈ ವೇಳೆ ಚಿನ್ನದ ತೂಕವು 4.5 ಕೆ.ಜಿ.ಯಷ್ಟು ಕಡಿಮೆಯಾಗಿತ್ತು.

ಸಚಿವರ ರಾಜೀನಾಮೆಗೆ ಪಟ್ಟು: ಕಲಾಪ ಮುಂದೂಡಿಕೆ

ದೇವಸ್ವಂ ಸಚಿವ ವಿ.ಎನ್‌.ವಾಸವನ್‌ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ವಿರೋಧ ಪಕ್ಷವಾದ ಕಾಂಗ್ರೆಸ್‌ ನೇತೃತ್ವದ ಯುನೈಟೆಡ್‌ ಡೆಮಾಕ್ರಟಿಕ್‌ ಫ್ರಂಟ್‌ (ಯುಡಿಎಫ್‌) ಶಾಸಕರು ಕೇರಳ ವಿಧಾನಸಭೆ ಕಲಾಪದ ಎರಡನೇ ದಿನವಾದ ಮಂಗಳವಾರವೂ ಪ್ರತಿಭಟನೆ ನಡೆಸಿದ್ದರಿಂದ ಗದ್ದಲದ ವಾತಾವರಣ ಉಂಟಾಗಿತ್ತು. ವಿರೋಧ ಪಕ್ಷದ ಶಾಸಕರು ಸಭಾಧ್ಯಕ್ಷರ ಪೀಠದ ಎದುರು ಬ್ಯಾನರ್‌ಗಳನ್ನು ಹಿಡಿದು 'ಸಿಪಿಐ ನೇತೃತ್ವದ ಸರ್ಕಾರವು ಅಯ್ಯಪ್ಪ ದೇವಸ್ಥಾನದ ಲೂಟಿಯಲ್ಲಿ ತೊಡಗಿದೆ' ಎಂದು ಆರೋಪಿಸಿ ಗದ್ದಲ ಎಬ್ಬಿಸಿದರು. ಸಭಾಧ್ಯಕ್ಷ ಎ.ಎನ್‌. ಶಂಶೀರ್‌ ಅವರು ಪ್ರಶ್ನೋತ್ತರ ಅವಧಿಯನ್ನು ಮೊಟಕುಗೊಳಿಸಿ ಸದನವನ್ನು ಸ್ವಲ್ಪ ಸಮಯ ಮುಂದೂಡಿದರು. ಕಲಾಪ ಆರಂಭವಾಗುತ್ತಿದ್ದಂತೆ ವಿರೋಧ ಪಕ್ಷದ ಶಾಸಕರು ಪುನಃ ಪ್ರತಿಭಟನೆಯನ್ನು ಮುಂದುವರಿಸಿದ್ದರಿಂದ ಸಭಾಧ್ಯಕ್ಷರು ಕಲಾಪವನ್ನು ಬುಧವಾರಕ್ಕೆ ಮುಂದೂಡಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries