ನವದೆಹಲಿ: ಸತತ ಮೂರನೆಯ ಅವಧಿಗೂ ಏರಿಕೆ ಪ್ರವೃತ್ತಿ ದಾಖಲಿಸಿದ ಚಿನ್ನ, ಪ್ರತಿ 10 ಗ್ರಾಂಗೆ 1,000 ರೂ. ಏರಿಕೆ ಕಂಡು, ಪ್ರತಿ 10 ಗ್ರಾಂಗೆ 1,31,800 ರೂ. ತಲುಪಿದೆ. ಹಬ್ಬದ ಋತುವಿನಲ್ಲಿ ಚಿಲ್ಲರೆ ವ್ಯಾಪಾರಿಗಳು ಹಾಗೂ ಆಭರಣ ಮಳಿಗೆಗಳು ನಿರಂತರವಾಗಿ ಚಿನ್ನದ ಖರೀದಿಯನ್ನು ಮುಂದುವರಿಸಿರುವುದರಿಂದ, ಈ ದಾಖಲೆಯ ಏರಿಕೆ ಕಂಡು ಬಂದಿದೆ.
ಆಲ್ ಇಂಡಿಯಾ ಸರಾಫ ಅಸೋಷಿಯೇಷನ್ ಪ್ರಕಾರ, ಮಂಗಳವಾರದ ವಹಿವಾಟಿನ ಅಂತ್ಯಕ್ಕೆ ಶೇ. 99.9 ಪರಿಶುದ್ಧತೆಯ ಪ್ರತಿ 10 ಗ್ರಾಂ ಚಿನ್ನದ ದರ 1,30,800 ರೂ. ಆಗಿತ್ತು. ಅದರಂತೆ ಆಭರಣ ಚಿನ್ನವು ಒಂದು ಗ್ರಾಂಗೆ 11,815 ರೂಪಾಯಿಯಂತೆ ಮಾರಾಟವಾಗಿದೆ.
ಸ್ಥಳೀಯ ಚಿನಿವಾರ ಪೇಟೆಯಲ್ಲಿ ಶೇ. 99.5 ಪರಿಶುದ್ಧತೆಯ ಚಿನ್ನದ ದರ ಪ್ರತಿ 10 ಗ್ರಾಂಗೆ 1,000 ರೂ.ನಂತೆ ಏರಿಕೆ ಕಂಡು, ಎಲ್ಲ ತೆರಿಗೆಗಳೂ ಸೇರಿದಂತೆ ಪ್ರತಿ 10 ಗ್ರಾಂಗೆ 1,31,200 ರೂ. ತಲುಪಿತು. ಇದಕ್ಕೂ ಮುನ್ನ, ಮಂಗಳವಾರದ ವಹಿವಾಟಿನಲ್ಲಿ ಪ್ರತಿ 10 ಗ್ರಾಂಗೆ 1,30,200 ರೂ.ಗೆ ಅಂತ್ಯಗೊಂಡಿತ್ತು.
ಆದರೆ, ದಾಖಲೆಯ ಮಟ್ಟ ತಲುಪಿದ್ದ ಬೆಳ್ಳಿಯ ದರ ಪ್ರತಿ ಒಂದು ಕೆಜಿಗೆ 3,000 ರೂ. ಇಳಿಕೆಯಾಗಿ, ಎಲ್ಲ ತೆರಿಗೆಗಳೂ ಸೇರಿದಂತೆ ಪ್ರತಿ ಕೆಜಿಗೆ 1,82,000 ರೂ. ತಲುಪಿತು.




