ವಾಷಿಂಗ್ಟನ್ : ಚೀನಾ ಜೊತೆ ನಂಟು ಮತ್ತು ಅಮೆರಿಕ ಸರಕಾರದ ರಹಸ್ಯ ದಾಖಲೆಗಳನ್ನು ಅನಧಿಕೃತವಾಗಿ ತಮ್ಮ ಬಳಿ ಸಂಗ್ರಹಿಸಿದ್ದ ಆರೋಪದಲ್ಲಿ ಭಾರತೀಯ ಮೂಲದ ವಿಶ್ಲೇಷಕ, ರಕ್ಷಣಾ ತಜ್ಞ ಆಶ್ಲೇ ಟೆಲ್ಲಿಸ್ ಅವರನ್ನು ಅಮೆರಿಕದ ಅಧಿಕಾರಿಗಳು ಬಂಧಿಸಿರುವ ಬಗ್ಗೆ ವರಿದಿಯಾಗಿದೆ.
ಆಶ್ಲೇ ಟೆಲ್ಲಿಸ್ ಅವರು ಭಾರತೀಯ ಮೂಲದ ಪ್ರಮುಖ ವಿಶ್ಲೇಷಕ ಮತ್ತು ದಕ್ಷಿಣ ಏಷ್ಯಾ ನೀತಿಯ ದೀರ್ಘಕಾಲದ ಸಲಹೆಗಾರರಾಗಿದ್ದರು. ಅಮೆರಿಕದ ವಿದೇಶಾಂಗ ಇಲಾಖೆಯ ಅಧಿಕಾರಿಯೊಬ್ಬರು ಆಶ್ಲೇ ಟೆಲ್ಲಿಸ್ ಅವರ ಬಂಧನವನ್ನು ದೃಢಪಡಿಸಿದ್ದಾರೆ. ಅಮೆರಿಕದ ಮಾಜಿ ಅಧ್ಯಕ್ಷ ಜಾರ್ಜ್ ಡಬ್ಲ್ಯು ಬುಷ್ ಅವರ ಆಪ್ತ ಸಲಹೆಗಾರರಲ್ಲಿ ಟೆಲ್ಲಿಸ್ ಅವರು ಒಬ್ಬರಾಗಿದ್ದರು.
ಟೆಲ್ಲಿಸ್ ಅವರು ವಿಯೆನ್ನಾದಲ್ಲಿರುವ ನಿವಾಸದಲ್ಲಿ ಸಾವಿರಕ್ಕೂ ಹೆಚ್ಚು ಪುಟಗಳ ಉನ್ನತ ರಹಸ್ಯ ದಾಖಲೆಗಳು ಸೇರಿದಂತೆ ರಾಷ್ಟ್ರೀಯ ರಕ್ಷಣಾ ಮಾಹಿತಿಯನ್ನು ಕಾನೂನುಬಾಹಿರವಾಗಿ ಉಳಿಸಿಕೊಂಡಿದ್ದಾರೆ ಎಂದು ಅಮೆರಿಕದ ನ್ಯಾಯ ಇಲಾಖೆ ತಿಳಿಸಿದೆ.
ಟೆಲ್ಲಿಸ್ ಚೀನಾದ ಅಧಿಕಾರಿಗಳನ್ನು ಭೇಟಿ ಮಾಡಿದ ಆರೋಪಗಳ ಬಗ್ಗೆಯೂ ತನಿಖಾಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಅಮೆರಿಕದ ಅಟಾರ್ನಿ ಲಿಂಡ್ಸೆ ಹ್ಯಾಲಿಗನ್ ಅವರು ಈ ಕುರಿತು ಪ್ರಕಟಣೆ ಹೊರಡಿಸಿದ್ದು, ಈ ಆಪಾದಿತ ನಡವಳಿಕೆಯು ನಮ್ಮ ನಾಗರಿಕರ ಸುರಕ್ಷತೆ ಮತ್ತು ಭದ್ರತೆಗೆ ಗಂಭೀರ ಅಪಾಯವನ್ನುಂಟುಮಾಡಿದೆ ಎಂದು ಹೇಳಿದ್ದಾರೆ.
ಅಪರಾಧಿ ಎಂದು ಸಾಬೀತಾದರೆ ಟೆಲ್ಲಿಸ್ 10 ವರ್ಷಗಳವರೆಗೆ ಜೈಲು ಶಿಕ್ಷೆ, 2,50,000 ಡಾಲರ್ ದಂಡ ತೆರಬೇಕಾಗಬಹುದು, ಅವರ ಸ್ವತ್ತುಗಳನ್ನು ಕೂಡ ಮುಟ್ಟುಗೋಲು ಹಾಕಿಕೊಳ್ಳಬಹುದಾಗಿದೆ.




