HEALTH TIPS

ವಾಟ್ಸ್‌ಆಯಪ್ ಸಂದೇಶದಲ್ಲಿ 'ಹೇಳಿರದ ಪದಗಳು' ಸಹ ದ್ವೇಷವನ್ನು ಉತ್ತೇಜಿಸಬಲ್ಲವು: ಅಲಹಾಬಾದ್ ಹೈಕೋರ್ಟ್

ನವದೆಹಲಿ: ವಾಟ್ಸ್‌ಆಯಪ್ ಸಂದೇಶವೊಂದು ಧರ್ಮವನ್ನು ಸ್ಪಷ್ಟವಾಗಿ ಉಲ್ಲೇಖಿಸಿರದಿದ್ದರೂ ಅದರಲ್ಲಿನ 'ಹೇಳಿರದ ಪದಗಳು' ಮತ್ತು 'ಗುಪ್ತ ಸಂದೇಶ' ಧಾರ್ಮಿಕ ದ್ವೇಷವನ್ನು ಉತ್ತೇಜಿಸಬಹುದು ಎಂದು ಅಲಹಾಬಾದ್ ಉಚ್ಚ ನ್ಯಾಯಾಲಯವು ಎತ್ತಿ ಹಿಡಿದಿದೆ.

ಧಾರ್ಮಿಕ ದ್ವೇಷವನ್ನು ಹರಡಿದ ಆರೋಪದಲ್ಲಿ ತನ್ನ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದುಗೊಳಿಸುವಂತೆ ಕೋರಿ ಉತ್ತರ ಪ್ರದೇಶದ ಬಿಜ್ನೋರ್ ನಿವಾಸಿ ಅಫಾಕ್ ಅಹ್ಮದ್ ಸಲ್ಲಿಸಿದ್ದ ಅರ್ಜಿಯನ್ನು ಸೆ.26ರಂದು ವಜಾಗೊಳಿಸಿದ ಸಂದರ್ಭದಲ್ಲಿ ನ್ಯಾಯಾಧೀಶರಾದ ಜೆ.ಜೆ.ಮುನೀರ್ ಮತ್ತು ಪ್ರಮೋದ ಕುಮಾರ ಶ್ರೀವಾಸ್ತವ ಅವರ ವಿಭಾಗೀಯ ಪೀಠವು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.

ಭಾನುವಾರ ಬಿಜ್ನೋರ್ ಪೋಲಿಸರು ಕ್ರಿಮಿನಲ್ ಬೆದರಿಕೆ ಮತ್ತು ಶಾಂತಿ ಭಂಗಕ್ಕೆ ಸಂಬಂಧಿಸಿದ ಬಿಎನ್‌ಎಸ್ ಕಲಮ್‌ಗಳಡಿ ಅಫಾಕ್ ವಿರುದ್ಧ ಎರಡನೇ ಎಫ್‌ಐಆರ್ ದಾಖಲಿಸಿದ್ದಾರೆ. ಆತನ ಸೋದರ ಮತ್ತು ಚಿಕ್ಕಪ್ಪನ ವಿರುದ್ಧ ಪ್ರತ್ಯೇಕ ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ.

ಅಕ್ರಮ ಮತಾಂತರ ಪ್ರಕರಣದಲ್ಲಿ ತನ್ನ ಸೋದರನ ಬಂಧನದ ಬಳಿಕ ಅಫಾಕ್ ರವಾನಿಸಿದ್ದ ವಾಟ್ಸ್‌ಆಯಪ್ ಸಂದೇಶವು ನ್ಯಾಯಾಂಗದಲ್ಲಿ ಆತನ ನಂಬಿಕೆಯನ್ನು ಪದೇ ಪದೇ ಪ್ರತಿಪಾದಿಸಿದ್ದರೂ 'ಧಾರ್ಮಿಕ ಭಾವನೆಗಳನ್ನು ಕೆರಳಿಸುವ' ಮತ್ತು 'ಸಮುದಾಯಗಳ ನಡುವೆ ದ್ವೇಷವನ್ನುಂಟು ಮಾಡುವ' ಸಾಮರ್ಥ್ಯವನ್ನು ಹೊಂದಿತ್ತು ಎಂದು ಸೆ.26ರ ತನ್ನ ತೀರ್ಪಿನಲ್ಲಿ ಉಚ್ಚ ನ್ಯಾಯಾಲಯವು ಹೇಳಿದೆ.

ಈ ಸಂದೇಶವು 'ಧರ್ಮದ ಬಗ್ಗೆ ಸ್ವತಃ ಮಾತನಾಡಿರದಿರಬಹುದು', ಆದರೆ ತನ್ನ ಸೋದರ ನಿರ್ದಿಷ್ಟ ಧಾರ್ಮಿಕ ಸಮುದಾಯಕ್ಕೆ ಸೇರಿದ್ದರಿಂದ ಆತನನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂಬ ಅಂತರ್ನಿಹಿತ ಮತ್ತು ಗೂಢ ಸಂದೇಶವನ್ನು ಖಂಡಿತವಾಗಿ ರವಾನಿಸುತ್ತದೆ ಎಂದು ಬೆಟ್ಟು ಮಾಡಿದ ಪೀಠವು, ಈ 'ಹೇಳಿರದ ಪದಗಳು' ಮೇಲ್ನೋಟಕ್ಕೆ ಇತರರ ಧಾರ್ಮಿಕ ಭಾವನೆಗಳನ್ನು ಕೆರಳಿಸಬಹುದು ಎಂದು ಎತ್ತಿ ಹಿಡಿಯಿತು ಮತ್ತು ಅಫಾಕ್ ವಿರುದ್ಧ ಪೋಲಿಸ್ ತನಿಖೆಯನ್ನು ಮಂದುವರಿಸಲು ಅನುಮತಿ ನೀಡಿತು.

ಸಾರ್ವಜನಿಕವಾಗಿ ಅಶ್ಲೀಲ ವರ್ತನೆ,ಶಾಂತಿ ಭಂಗಕ್ಕೆ ಪ್ರಚೋದನೆ ಮತ್ತು ಕ್ರಿಮಿನಲ್ ಬೆದರಿಕೆಯನ್ನು ಆರೋಪಿಸಿ ಆರೆಸ್ಸೆಸ್ ಕಾಯಕರ್ತ ಸಂದೀಪ್ ಕೌಶಿಕ್ ದಾಖಲಿಸಿದ್ದ ದೂರಿನ ಮೇರೆಗೆ ಜು.19ರಂದು ಅಫಾಕ್‌ನ ಸೋದರ ಆರಿಫ್ ಅಹ್ಮದ್‌ನನ್ನು ಪೋಲಿಸರು ಬಂಧಿಸಿದಾಗಿನಿಂದ ಘಟನೆಗಳ ಸರಮಾಲೆ ಆರಂಭಗೊಂಡಿತ್ತು.

ತನ್ನ ತಂದೆಯೊಂದಿಗೆ ಇಲೆಕ್ಟ್ರಾನಿಕ್ಸ್ ಮತ್ತು ಗ್ಯಾಸ್ ಫಿಲ್ಲಿಂಗ್ ಅಂಗಡಿಯನ್ನು ನಡೆಸುತ್ತಿರುವ ಆರಿಫ್ ದೇಶವಿರೋಧಿ ಮತ್ತು ಸಮಾಜ ವಿರೋಧಿ ಶಕ್ತಿಗಳೊಂದಿಗೆ ಸಂಪರ್ಕ ಹೊಂದಿದ್ದಾನೆ ಎಂದು ಕೌಶಿಕ್ ದೂರಿನಲ್ಲಿ ಆರೋಪಿಸಿದ್ದಾರೆ. ಆರಿಫ್ 'ಲವ್ ಜಿಹಾದ್'ನಲ್ಲಿ ಭಾಗಿಯಾಗಿದ್ದಾನೆ. ಹಿಂದು ಮಹಿಳೆಯರಿಗೆ ಆಮಿಷವೊಡ್ಡಿ ಪ್ರೇಮ ಸಂಬಂಧ ಬೆಳೆಸಿ,ಸುಳ್ಳು ಹೆಸರುಗಳಲ್ಲಿ ಅವರಿಗೆ ಪಾಸ್‌ಪೋರ್ಟ್ ಒದಗಿಸಿ ನಂತರ ಅವರನ್ನು ಮಾರಾಟ ಮಾಡಲು ವಿದೇಶಗಳಿಗೆ ಕರೆದೊಯ್ಯುತ್ತಾನೆ ಎಂದೂ ದೂರಿನಲ್ಲಿ ಆಪಾದಿಸಲಾಗಿದೆ.

ನಂತರ ಎಫ್‌ಐಆರ್‌ನಲ್ಲಿ ಅತ್ಯಾಚಾರ, ವಿಷಪ್ರಾಶನ, ವಂಚನೆ ಮತ್ತು ಫೋರ್ಜರಿ ಹಾಗೂ ಉತ್ತರ ಪ್ರದೇಶ ಕಾನೂನು ಬಾಹಿರ ಧಾರ್ಮಿಕ ಮತಾಂತರ ಕಾಯ್ದೆ 2021ರಡಿ ತಪ್ಪು ಮಾಹಿತಿ ಅಥವಾ ಆಮಿಷದ ಮೂಲಕ ಅಕ್ರಮ ಮತಾಂತರದ ಆರೋಪಗಳನ್ನು ಸೇರಿಸಲಾಗಿತ್ತು. ಆರಿಫ್ ಇನ್ನೂ ಜೈಲಿನಲ್ಲಿದ್ದಾನೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries