HEALTH TIPS

ಟ್ರಂಪ್ ಹಾಜರು, ಮೋದಿ ಗೈರು; ವಿಶ್ವಗುರು, ಫೋಟೊ ಅವಕಾಶ ಕೈಚೆಲ್ಲಿದ PM: ಕಾಂಗ್ರೆಸ್

ನವದೆಹಲಿ: ಮಲೇಷ್ಯಾದಲ್ಲಿ ಆಯೋಜನೆಗೊಂಡಿರುವ ದಕ್ಷಿಣ ಏಷ್ಯಾ ರಾಷ್ಟ್ರಗಳ ಒಕ್ಕೂಟದ (ASEAN) ಸಭೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಗೈರಾಗುತ್ತಿರುವುದಕ್ಕೆ ಕುಹಕವಾಡಿರುವ ಕಾಂಗ್ರೆಸ್, 'ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರಿಂದ ಮೂಲೆಗುಂಪಾಗುವುದನ್ನು ತಪ್ಪಿಸಿಕೊಳ್ಳಲು ಪ್ರಧಾನಿ ಕಾರಣ ಕಂಡುಕೊಂಡಿದ್ದಾರೆ' ಎಂದಿದೆ.

ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್‌ ಒಂದನ್ನು ಗುರುವಾರ ಹಂಚಿಕೊಂಡಿದ್ದಾರೆ.

'ಸಾಮಾಜಿಕ ಮಾಧ್ಯಮಗಳಲ್ಲಿ ಟ್ರಂಪ್ ಹೊಗಳಿ ಪೋಸ್ಟ್ ಮಾಡಿರುವುದು ಒಂದೆಡೆಯಾದರೆ, ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧವನ್ನು ತಾನೇ ನಿಲ್ಲಿಸಿದ್ದಾಗಿ ಈಗಾಗಲೇ 53 ಸಲ ಟ್ರಂಪ್ ಪುನರುಚ್ಚರಿಸಿದ್ದಾರೆ. ಅಷ್ಟು ಸಾಲದು ಎಂಬಂತೆ ರಷ್ಯಾದಿಂದ ಭಾರತ ತೈಲ ಖರೀದಿ ನಿಲ್ಲಿಸಲಿದೆ ಎಂದು ಈಗಾಗಲೇ ಐದು ಬಾರಿ ಹೇಳಿದ್ದಾರೆ. ಇಂಥ ವ್ಯಕ್ತಿಯನ್ನು ನೇರವಾಗಿ ವೈಯಕ್ತಿಕವಾಗಿ ಭೇಟಿ ಆಗುವುದು ಮೋದಿ ಅವರಿಗೆ ತೀರಾ ಅಪಾಯಕಾರಿ' ಎಂದಿದ್ದಾರೆ.

'ಕಳೆದ ಕೆಲ ದಿನಗಳಿಂದ ಆಸಿಯಾನ್ ಸಭೆಯಲ್ಲಿ ಭಾಗಿಯಾಗಲು ಕ್ವಾಲಾಲಂಪುರಕ್ಕೆ ಪ್ರಧಾನಿ ಮೋದಿ ಹೋಗುವರೇ ಅಥವಾ ಹೋಗುವುದಿಲ್ಲವೇ ಎಂಬ ಚರ್ಚೆಗಳು ನಡೆಯುತ್ತಲೇ ಇದ್ದವು. ಅದರಲ್ಲಿ ಭಾಗವಹಿಸುವುದಿಲ್ಲ ಎಂದು ಈಗ ಖಚಿತವಾಗಿದೆ. ಇದರಿಂದ ವಿಶ್ವದ ವಿವಿಧ ರಾಷ್ಟ್ರಗಳ ನಾಯಕರನ್ನು ತಬ್ಬಿಕೊಂಡು, ಅವರೊಂದಿಗೆ ಚಿತ್ರ ತೆಗೆಸಿಕೊಳ್ಳುವುದರಿಂದ ಮೋದಿ ಅವರು ವಂಚಿತರಾಗಿದ್ದಾರೆ. ಜತೆಗೆ ವಿಶ್ವ ವೇದಿಕೆಯಲ್ಲಿ 'ತಾನೊಬ್ಬ ವಿಶ್ವಗುರು' ಎಂದು ಹೇಳಿಕೊಳ್ಳುವ ಅವಕಾಶವನ್ನೂ ಕೈಚೆಲ್ಲಿದ್ದಾರೆ' ಎಂದೂ ವ್ಯಂಗ್ಯವಾಡಿದ್ದಾರೆ.

'ಇದಕ್ಕೆ ಮುಖ್ಯ ಕಾರಣ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಂಬುದು ನಗ್ನ ಸತ್ಯ. ಕೆಲ ದಿನಗಳ ಹಿಂದೆ ಈಜಿಪ್ಟ್‌ನಲ್ಲಿ ನಡೆದ ಗಾಜಾ ಶಾಂತಿ ಸಭೆಯಲ್ಲಿ ಭಾಗವಹಿಸುವ ಆಹ್ವಾನವನ್ನೂ ಮೋದಿ ತಿರಸ್ಕರಿಸಿದ್ದೂ ಇದೇ ಕಾರಣಕ್ಕಾಗಿ. ಈಗಲೂ ಟ್ರಂಪ್ ಅವರಿಂದ ತಪ್ಪಿಸಿಕೊಳ್ಳಲು ಗೈರಾಗುವ ತಂತ್ರವನ್ನು ಅಳವಡಿಸಿಕೊಂಡಿದ್ದಾರೆ' ಎಂದು ಜೈರಾಮ್ ರಮೇಶ್ ತಿವಿದಿದ್ದಾರೆ.

ಇದರೊಂದಿಗೆ ಬಾಲಿವುಡ್‌ನ ಜನಪ್ರಿಯ ಗೀತೆ 'ಬಚ್‌ ಕೆ ರೆಹನಾ ರೆ ಬಾಬಾ, ಬಚ್‌ಕೆ ರೆಹನಾ ಹೆ' ಗೀತೆಯ ಸಾಲನ್ನು ತಮ್ಮ ಪೋಸ್ಟ್‌ನಲ್ಲಿ ಸೇರಿಸಿದ್ದಾರೆ.

ಮಲೇಷ್ಯಾದಲ್ಲಿ ಅ. 26ರಿಂದ 28ರವರೆಗೆ ಆಯೋಜನೆಗೊಂಡಿರುವ ಆಸಿಯಾನ್ ಶೃಂಗ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಬದಲು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಪಾಲ್ಗೊಳ್ಳುತ್ತಿದ್ದಾರೆ. ಈ ವಿಷಯವನ್ನು ಕೇಂದ್ರ ಸರ್ಕಾರವು, ಮಲೇಷ್ಯಾಗೆ ತಿಳಿಸಿದೆ ಎಂದು ಮೂಲಗಳು ಖಚಿತಪಡಿಸಿವೆ.

ಈ ಸಭೆಯಲ್ಲಿ ವರ್ಚುವಲ್ ವೇದಿಕೆಯಲ್ಲಿ ಪ್ರಧಾನಿ ಮೋದಿ ಅವರು ಪಾಲ್ಗೊಳ್ಳುವ ಸಾಧ್ಯತೆಗಳಿವೆ. ಈ ಸಭೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಇತರ ರಾಷ್ಟ್ರಗಳ ನಾಯಕರನ್ನು ಮಲೇಷ್ಯಾ ಆಹ್ವಾನಿಸಿದೆ. ಟ್ರಂಪ್ ಅವರು ಅ. 26ರಂದು ಕ್ವಾಲಾಲಂಪುರಕ್ಕೆ ಎರಡು ದಿನಗಳ ಭೇಟಿ ನೀಡಲಿದ್ದಾರೆ.

1992ರಲ್ಲಿ ಪ್ರಾದೇಶಿಕ ಪಾಲುದಾರಿಕೆ ಮೂಲಕ ಆಸೀನ್ ಮತ್ತು ಭಾರತದ ಸಂಬಂಧ ಆರಂಭವಾಯಿತು. 1995ರಲ್ಲಿ ಇದು ಪೂರ್ಣ ಪ್ರಮಾಣಕ್ಕೆ ಬೆಳೆಯಿತು. 2022ರಲ್ಲಿ ಇದು ಶೃಂಗ ಸಭೆಯ ಮಟ್ಟಕ್ಕೆ ವೃದ್ಧಿಸಿತು. 2012ರಲ್ಲಿ ಕಾರ್ಯತಂತ್ರದ ಪಾಲುದಾರಿಕೆಯಾಗಿ ಈ ಸಂಬಂಧ ಇನ್ನಷ್ಟು ವಿಸ್ತರಿಸಿಕೊಂಡಿತು.

ಇಂಡೊನೇಷ್ಯಾ, ಮಲೇಷ್ಯಾ, ಫಿಲಿಪಿನ್ಸ್, ಸಿಂಗಪೂರ, ಥಾಯ್ಲೆಂಡ್, ಬ್ರುನೈ, ವಿಯಟ್ನಾಂ, ಲಾವೋಸ್, ಮ್ಯಾನ್ಮಾರ್ ಮತ್ತು ಕಾಂಬೋಡಿಯಾ ಸೇರಿದಂತೆ ಹತ್ತು ರಾಷ್ಟ್ರಗಳು ಆಸಿಯಾನ್ ಒಕ್ಕೂಟದಲ್ಲಿವೆ.

ಆಸಿಯಾನ್ ವ್ಯಾಪ್ತಿಯಲ್ಲಿ ವ್ಯಾಪಾರ, ಹೂಡಿಕೆ, ಭದ್ರತೆ ಮತ್ತು ರಕ್ಷಣೆ ವಿಷಯದಲ್ಲಿ ಆಸಿಯಾನ್ ರಾಷ್ಟ್ರಗಳ ನಡುವಿನ ಸಹಕಾರ ಮಹತ್ವದ್ದು ಎಂದೇ ಹೇಳಲಾಗುತ್ತಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries