ಬದಿಯಡ್ಕ: ಜಿಲ್ಲೆಯ ಕಾಸರಗೋಡು ಹಾಗೂ ವಯನಾಡು ವ್ಯದ್ಯಕೀಯ ಕಾಲೇಜು ಆಸ್ಪತ್ರೆಗಳಿಗೆ ಕೇಂದ್ರ ಆರೋಗ್ಯ ಮಂಡಳಿಯ ಅನುಮೋದನೆ ಲಭ್ಯವಾಗುವುದರೊಂದಿಗೆ ಎಲ್ಲಾ ಜಿಲ್ಲೆಗಳಲ್ಲಿ ವೈದ್ಯಕೀಯ ಕಾಲೇಜು ಆಸ್ಪತ್ರೆ ಹಾಗೂ ನರ್ಸಿಂಗ್ ಕಾಲೇಜು ಹೊಂದಿರುವ ರಾಜ್ಯವಾಗಿ ಕೇರಳ ಮಾರ್ಪಟ್ಟಿರುವುದಾಗಿ ಆರೋಗ್ಯ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ.
ಅವರು ಬದಿಯಡ್ಕ ಪಂಚಾಯಿತಿ ಉಕ್ಕಿನಡ್ಕದಲ್ಲಿ ತಲೆಯೆತ್ತುತ್ತಿರುವ ಕಾಸರಗೋಡು ವೈದ್ಯಕೀಯ ಕಾಲೇಜು ಆಸ್ಪತ್ರೆಯ ಎಂಬಿಬಿಎಸ್ ವಿದ್ಯಾರ್ಥಿಗಳ ಪ್ರವೇಶೋತ್ಸವ ಉದ್ಘಾಟಿಸಿ ಮಾತನಾಡಿದರು.
ಉಕ್ಕಿನಡ್ಕದಲ್ಲಿ ತಲೆಯೆತ್ತಿರುವ ಕಾಸರಗೋಡು ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಇದು ಐತಿಹಾಸಿಕ ಕ್ಷಣವಾಗಿದೆ. ಸ್ಥಗಿತಗೊಂಡಿರುವ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಒಂದು ಬ್ಲಾಕ್‍ನ ನಿರ್ಮಾಣ ಕಾರ್ಯವನ್ನು ನಾಲ್ಕು ತಿಂಗಳೊಳಗೆ ಪೂರ್ತಿಗೊಳಿಸಲಾಗುವುದು. ಕಾಸರಗೋಡು ಸರ್ಕಾರಿ ವೈದ್ಯಕೀಯ ಕಾಲೇಜು ಎಂಡೋಸಲ್ಫಾನ್ ಸಂತ್ರಸ್ತರಿಗೆ ಕೇರಳದ ಅತಿದೊಡ್ಡ ಆಸ್ಪತ್ರೆಯಾಗಲಿದ್ದು, ಮುಂದೆ ದೊಡ್ಡ ಸ್ಪೆಷಾಲಿಟಿ ಕೇಂದ್ರವಾಗಿ ಅಭಿವೃದ್ಧಿಗೊಳಿಸಲಾಗುವುದು ಎಂದು ಸಚಿವರು ಹೇಳಿದರು.
ಕಾಲೇಜಿನಲ್ಲಿ 273 ಬೋಧಕ ಮತ್ತು ಬೋಧಕೇತರ ಹುದ್ದೆಗಳಿದ್ದು, ಪ್ರಸಕ್ತ 'ಕಿಫ್‍ಬಿ'ಯಿಂದ 160 ಕೋಟಿ ರೂ. ಮೊತ್ತವನ್ನು ಲ್ಯಾಬ್ ಸ್ಥಾಪಿಸಲು ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ಮೂಲಕ ಮಂಜೂರಗೊಳಿಸಲಾಗಿದೆ. ಕಾಳೇಜಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳು ತಮ್ಮ ಅಧ್ಯಯನದತ್ತ ಗಮನಹರಿಸಿ, ಭವಿಷ್ಯದಲ್ಲಿ ಅತ್ಯುತ್ತಮ ವೈದ್ಯರಾಗಿ ಸೇವೆ ಸಲ್ಲಿಸುವಂತೆ ಸಚಿವರು ಮನವಿ ಮಾಡಿದರು.
ಶಾಸಕ ಎನ್.ಎ. ನೆಲ್ಲಿಕುನ್ನು ಅಧ್ಯಕ್ಷತೆ ವಹಿಸಿದ್ದರು. ಸಂಸದ ಮೋಹನ್ ಎಂ.ಪಿ. ಉಣ್ಣಿತ್ತಾನ್ ಮುಖ್ಯ ಅತಿಥಿಗಳಾಗಿದ್ದರು. ರಾಜ್ಯ ವೈದ್ಯಕೀಯ ಶಿಕ್ಷಣ ನಿರ್ದೇಶಕ ಕೆ.ವಿ. ವಿಶ್ವನಾಥನ್ ವರದಿ ಮಂಡಿಸಿದರು. ಶಾಸಕರಾದ ಸಿ.ಎಚ್. ಕುಞಂಬು, ಎ.ಕೆ.ಎಂ. ಅಶ್ರಫ್, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಶಾನವಾಸ್ ಪಾದೂರು, ಕೆಡಿಪಿ ವಿಶೇಷಾಧಿಕಾರಿ ವಿ.ಚಂದ್ರನ್, ಬದಿಯಡ್ಕ ಗ್ರಾ.ಪಂ ಉಪಾಧ್ಯಕ್ಷ ಎಂ.ಅಬ್ಬಾಸ್, ಎಣ್ಮಕಜೆ ಗ್ರಾಪಂ ಅಧ್ಯಕ್ಷ ಜೆ.ಎಸ್. ಸೋಮಶೇಖರ, ವಾರ್ಡ್ ಸದಸ್ಯೆ ಜ್ಯೋತಿ, ನಿರ್ಮಿತಿ ಕೇಂದ್ರದ ಆಡಳಿತ ನಿರ್ದೇಶಕ ರಾಜಮೋಹನ್, ಕಾಸರಗೋಡು ಡಿಎಂಒ ಡಾ. ಎ.ವಿ. ರಾಮ್‍ದಾಸ್, ಸಹಾಐಕ ಡಿ.ಎಂ.ಒ ಬಿ.ಸಂತೋಷ್, ಎನ್.ಎಚ್.ಎಂ ಜಿಲ್ಲಾ ಕಾರ್ಯಕ್ರಮ ನಿರ್ವಾಹಕ ಡಾ.ಅರುಣ್, ಜನರಲ್ ಆಸ್ಪತ್ರೆ ಅಧೀಕ್ಷಕ ಎಂ.ಶ್ರೀಕುಮಾರ್, ಉಕ್ಕಿನಡ್ಕದ ವೈದ್ಯಕೀಯ ಕಾಲೇಜು ಅಧೀಕ್ಷಕ ಆರ್.ಪ್ರವೀಣ್, ವೈದ್ಯಕೀಯ ಕಾಲೇಜು ಪಿಟಿಎ ಕಾರ್ಯದರ್ಶಿ ಪಿ.ಶಾಲಿನಿ ಕೃಷ್ಣನ್,ನಸಿರ್ಂಗ್ ಕಾಲೇಜಿನ ಪ್ರಾಂಶುಪಾಲೆ ಪಿ.ಎಸ್. ಶೋಭಾ, ಸಿಬ್ಬಂದಿ ಮಂಡಳಿ ಕಾರ್ಯದರ್ಶಿ ಹರಿಹರನ್ ನಾಯರ್, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು, ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ಸ್ವಾಗತಿಸಿದರು. ಸರ್ಕಾರಿ ವೈದ್ಯಕೀಯ ಕಾಲೇಜು ಪ್ರಾಂಶುಪಾಲೆ ಡಾ. ಪಿ.ಎಸ್. ಇಂದು ವಂದಿಸಿದರು.
ವೈದ್ಯಕೀಯ ಕಾಲೇಜಿಗೆ 50ಮಂದಿ ವಿದ್ಯಾರ್ಥಿಗಳ ಸೇರ್ಪಡೆಗೆ ಕೇಂದ್ರ ಆರೋಗ್ಯ ಮಂಡಳಿ ಅನುಮತಿ ನೀಡಿದ್ದು, ಈಗಾಗಲೇ ಕಾಸರಗೋಡು ಜಿಲ್ಲೆಯ ಒಬ್ಬಾಕೆ ಸೇರಿದಂತೆ 40ಮಂದಿ ವಿದ್ಯಾರ್ಥಿಗಳು ಸೇರ್ಪಡೆಗೊಂಡಿದ್ದಾರೆ.







