ಬದಿಯಡ್ಕ: ಜೈ ತುಲುನಾಡ್ ಕಾಸ್ರೋಡು ಸಮಿತಿ ಮತ್ತು ವಿದ್ಯಾರಂಗ ಸಾಹಿತ್ಯ ವೇದಿಕೆ ಯು.ಪಿ. ವಿಭಾಗ, ನವಜೀವನ ಹೈಯರ್ ಸೆಕೆಂಡರಿ ಶಾಲೆ ಪೆರಡಾಲ ಬದಿಯಡ್ಕ ಇವರ ಜಂಟಿ ಆಶ್ರಯದಲ್ಲಿ ಶುಕ್ರವಾರ ತುಳು ಲಿಪಿಬ್ರಹ್ಮನೆಂದೇ ಖ್ಯಾತರಾದ ದಿ. ಡಾ.ಪುಂಡೂರು ವೆಂಕಟರಾಜ ಪುಣಿಚಿತ್ತಾಯರ ಜನ್ಮದಿನವನ್ನು ವಿಶ್ವ ತುಳು ಲಿಪಿ ದಿನವಾಗಿ ಪೆರಡಾಲ ಶಾಲೆಯಲ್ಲಿ ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೈ ತುಲುನಾಡ್ ಕೇಂದ್ರ ಸಮಿತಿ ಉಪಾಧ್ಯಕ್ಷೆ ವಿನೋದ ಪ್ರಸಾದ್ ರೈ ವಹಿಸಿದ್ದರು. ಶಾಲಾ ಮುಖ್ಯೋಪಾಧ್ಯಾಯಿನಿ ಮಿನಿ ದೀಪ ಬೆಳಗಿಸಿ ಉದ್ಘಾಟಿಸಿದರು. ವಿಜಯರಾಜ ಪುಣಿಚಿತ್ತಾಯ ಪುಂಡೂರು, ಡಾ.ಶ್ರೀನಿಧಿ ಸರಳಾಯ ಬದಿಯಡ್ಕ, ಅಧ್ಯಾಪಕರಾದ ನಿರಂಜನ್ ರೈ ಪೆರಡಾಲ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದರು.
ತುಳು ಭಾಷೆಗೆ ಅದರದೇ ಆದ ಲಿಪಿ ಇದೆ. ತುಳು ಮಾತೃಭಾಷಿಕರಾದ ನಾವು ತುಳು ಲಿಪಿಯನ್ನು ಕಲಿಯಲೇ ಬೇಕು. ಮರೆಗೆ ಸರಿಯುತ್ತಿದ್ದ ತುಳು ಲಿಪಿಯನ್ನು ಸಂಶೋಧನೆ ಮಾಡಿ ಎಲ್ಲರಿಗೂ ಕಲಿಯಲು ಯೋಗ್ಯ ಹಾಗೂ ಸುಲಭವಾಗುಂತೆ ಸಂಶೋಧಿಸಿಕೊಟ್ಟ, ಮಹಾನ್ ಸಾಧಕರೂ, ಸಾಹಿತಿಗಳೂ ಆದ ದಿ.ವೆಂಕಟರಾಜ ಪುಣಿಚಿತ್ತಾಯರ ಸ್ಮರಣಾರ್ಹರು. ಈ ಕಾರ್ಯಕ್ರಮದ ಮುಖೇನ ಅವರಿಗೆ ಗೌರವವನ್ನು ಸಲ್ಲಿಸುತ್ತಾ ತುಳು ಲಿಪಿಯನ್ನು ಅಲ್ಲಲ್ಲಿ ಉಚಿತವಾಗಿ ಕಲಿಸುತ್ತಾ ಬರುತ್ತಿರುವ ಜೈ ತುಲುನಾಡ್ ಸಂಘಟನೆಯ ಕಾರ್ಯ ಶ್ಲಾಘನೀಯ ಎಂದು ಅತಿಥಿಗಳು ಶುಭ ನುಡಿದರು.
ಶಾಲಾ ಮಕ್ಕಳ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಜೈ ತುಲುನಾಡ್ ಕಾಸ್ರೋಡು ಸಮಿತಿಯ ಕೋಶಾಧಿಕಾರಿ ಶ್ರೀನಿವಾಸ ಆಳ್ವ ಸ್ವಾಗತಿಸಿದರು. ಶಾಲಾ ಮಕ್ಕಳು ಪುವೆಂಪು ಬರೆದ ಭಾವಗೀತೆಗಳನ್ನು ಹಾಡಿದರು. ತುಳು ಲಿಪಿ ದಿನಾಚರಣೆ ಬಗ್ಗೆ ನಡೆದ ತುಳು ಲಿಪಿ ಬರವುದ ಪಂಥೊದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಜೈ ತುಲುನಾಡ್ ಕಾಸ್ರೋಡ್ ಸಮಿತಿಯ ಕಾರ್ಯದರ್ಶಿ ಹರಿಕಾಂತ ಕಾಸರಗೋಡು ವಂದಿಸಿದರು. ಶಿಕ್ಷಕಿ ಪ್ರಭಾವತಿ ಕೆದಿಲಾಯ ನಿರೂಪಿಸಿದರು. ಉತ್ತಮ್, ಪವಿತ್ರ ಮಾಡ, ಕುಶಲಾಕ್ಷಿ ಕಣ್ವತೀರ್ಥ ಸಹಕರಿಸಿದರು.








