ಕುಲು: ಹಿಮಾಚಲ ಪ್ರದೇಶದಲ್ಲಿ 27 ವರ್ಷ ವಯಸ್ಸಿನ ಕೆನಡಾ ಮೂಲದ ಪ್ಯಾರಾಗ್ಲೈಡರ್, ಲ್ಯಾಂಡಿಂಗ್ ವೇಳೆ ದೌಲಾಧರ್ ಪರ್ವತಶ್ರೇಣಿಗೆ ಅಪ್ಪಳಿಸಿ ಮೃತಪಟ್ಟಿದ್ದಾರೆ. ಏತನ್ಮಧ್ಯೆ ಕಂಗ್ರಾ ಮತ್ತು ಕುಲು ಜಿಲ್ಲೆಯ ಆಗಸ ತಲುಪಿದ್ದ ಇಬ್ಬರು ವಿದೇಶಿ ಪೈಲಟ್ ಗಳನ್ನು ರಕ್ಷಿಸಲಾಗಿದೆ.
ಮೃತಪಟ್ಟ ಪ್ಯಾರಾಗ್ಲೈಡರ್ ಮೆಗಾನ್ ಎಲಿಜಬೆತ್ ಅವರ ಅಂತ್ಯಕ್ರಿಯೆಯನ್ನು ಬೀರ್ ನಲ್ಲಿ ಹಿಂದೂ ಸಂಪ್ರದಾಯಗಳಿಗೆ ಅನುಸಾರವಾಗಿ ಮಂಗಳವಾರ ಕೈಗೊಳ್ಳಲಾಗಿದೆ.
ಈ ಮೂವರು ಪ್ಯಾರಾಗ್ಲೈಡರ್ ಗಳು ವಿಶ್ವದ ಎಲ್ಲೆಡೆಗಳಿಂದ ಸಾಹಸಿಗಳನ್ನು ಆಕರ್ಷಿಸುವ ಧರ್ಮಶಾಲೆ ಸಮೀಪದ 8000 ಅಡಿ ಎತ್ತರದ ಬೀರ್-ಬಿಲ್ಲಿಂಗ್ ತಾಣದಿಂದ ಆಗಸದಲ್ಲಿ ಸಾಹಸ ಆರಂಭಿಸಿದ್ದರು. ಎಲಿಜಬೆತ್ ಅಕ್ಟೋಬರ್ 18ರಂದು ಬೆಳಿಗ್ಗೆ 9.45ಕ್ಕೆ ಸಾಹಸ ಆರಂಭಿಸಿದ್ದರು. ಅದರೆ ಅನಿವಾರ್ಯವಾಗಿ ದೌಲಾಧರ್ ಪರ್ವತ ಶ್ರೇಣಿಯಲ್ಲಿ ಸುಮಾರು 40 ಕಿಲೋಮೀಟರ್ ದೂರ ಹಾಗೂ 13120 ಅಡಿ ಎತ್ತರದ ಕಲ್ಲುಬಂಡೆಗಳಿಂದ ಕೂಡಿದ ಕಂದಕಕ್ಕೆ ಅಪ್ಪಳಿಸಿ ಲ್ಯಾಂಡಿಂಗ್ ಮಾಡಬೇಕಾಯಿತು.
ಕಂಗ್ರಾ ಆಡಳಿತಕ್ಕೆ ಮಾಹಿತಿ ಲಭ್ಯವಾದ ತಕ್ಷಣ ಶೋಧ ಮತ್ತು ಪರಿಹಾರ ಕಾರ್ಯಾಚರಣೆ ಆರಂಭಿಸಲಾಗಿತ್ತು. ಬಿಲ್ಲಿಂಗ್ ಪ್ಯಾರಾಗ್ಲೈಡಿಂಗ್ ಅಸೋಸಿಯೇಶನ್ ನ ತಂಡ ಹೆಲಿಕಾಪ್ಟರ್ ಮೂಲಕ ಧೌಲಾಧರ್ ಪರ್ವತ ಶ್ರೇಣಿಯಲ್ಲಿ ಶೋಧನೆ ನಡೆಸಿ, ಅಪಘಾತ ನಡೆದ ಸ್ಥಳದಲ್ಲಿ ಹೆಲಿಕಾಪ್ಟರ್ ಇಳಿಯಲು ಜಾಗವಿಲ್ಲದ ಹಿನ್ನೆಲೆಯಲ್ಲಿ ನಾಯಕ ರಾಹುಲ್ ಸಿಂಗ್ ಅವರನ್ನು ಕೆಳಕ್ಕೆ ಇಳಿಸಿತ್ತು. ಎಲಿಜಬೆತ್ ಅವರನ್ನು ಪತ್ತೆ ಮಾಡಿ ಪರಿಪೂರ್ಣ ರಕ್ಷಣಾ ತಂಡ ಆಗಮಿಸುವವರೆಗೆ ಆಕೆ ಜೀವ ಉಳಿಸಿಕೊಳ್ಳಲು ನೆರವಾಬೇಕಿತ್ತು. ಆದರೆ ಪತ್ತೆ ಮಾಡಲು ಸಾಧ್ಯವಾಗದೇ, ಇಡೀ ರಾತ್ರಿಯನ್ನು ಕಂದಕದ ಬದಿಯಲ್ಲಿ ರಾಹುಲ್ ಸಿಂಗ್ ಕಳೆಯಬೇಕಾಯಿತು.
ಭಾನುವಾರ ಬೆಳಿಗ್ಗೆ ನಾಲ್ವರು ಸದಸ್ಯರ ಬಿಪಿಎ ತಂಡ ಆಕೆಯನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿತ್ತು. ದಿಢೀರನೇ ಹವಾಮಾನ ಬದಲಾವಣೆಯಾದ ಹಿನ್ನೆಲೆಯಲ್ಲಿ ಅಥವಾ ಗ್ಲೈಡರ್ ನಲ್ಲಿ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಎಲಿಜಬೆತ್ ಗೆ ಕ್ರ್ಯಾಷ್ ಲ್ಯಾಂಡಿಂಗ್ ಅನಿವಾರ್ಯವಾಯಿತು. ಕೆಳಮಟ್ಟದಲ್ಲಿ ಹಾರಾಡುತ್ತಿದ್ದ ಆಕೆ ಕಲ್ಲಿಗೆ ಅಪ್ಪಳಿಸಿ ಮೃತಪಟ್ಟಿರಬೇಕು ಎಂದು ತಂಡದ ತಜ್ಞರು ಹೇಳಿದ್ದಾರೆ. ಆಕೆಯ ತಲೆಗೆ ಗಂಭೀರ ಗಾಯಗಳಾಗಿದ್ದವು ಎಂದು ಬಿಪಿಎ ಸಂಸ್ಥಾಪಕ- ನಿರ್ದೇಶಕ ಸುರೇಶ್ ಠಾಕೂರ್ ಹೇಳಿದ್ದಾರೆ.
ಎಲಿಜಬೆತ್ ಮೃತದೇಹ 1000 ಮೀಟರ್ ಆಳದ ಕಂದಕದಲ್ಲಿ ಪತ್ತೆಯಾಗಿದ್ದು, ಬಳಿಕ ಕಾಂಗ್ರಾಗೆ ಏರ್ ಲಿಫ್ಟ್ ಮಾಡಿ ಅಟಾಪ್ಸಿ ನಡೆಸಲಾಯಿತು. ರಷ್ಯಾದ ನಿಕಿಟಾ ವಸಿಲ್ಸ್ಟೋವ್ ಹಾಗೂ ಆಸ್ಟ್ರೇಲಿಯಾದ ಜಾಕೋಬ್ ಕ್ರ್ಯಾಮೆರ್ ಅವರನ್ನು ರಕ್ಷಿಸಲಾಗಿದೆ.

