ಕುಂಬಳೆ: ನಿಮ್ಮ ಮನೆ ಬಳಿಯ ತೋಟ,ಗುಡ್ಡಗಳಲ್ಲಿ ತೆಂಗಿಮರ ಇನ್ನಿತರ ಮರಗಳು ವಾಲಿ ನಿಂತು ಮನೆ ಮೇಲೆ ಅಥವಾ ಪಕ್ಕದ ಕಟ್ಟಡ, ಸ್ಥಳಕ್ಕೆ ಬೀಳುವ ಅಪಾಯದಿಂದ ರಕ್ಷಿಸಲು ತೆಂಗಿನ ಮರಕ್ಕೆ ಕಬ್ಬಿಣದ ತಂತಿ ಎಳೆದು ಕಟ್ಟಿಸುವ ಕೆಲಸ ಹಲವಾರು ವರ್ಷಗಳಿಂದ ನಡೆದುಬರುತ್ತಿದೆ. ಇದರ ನೆಪದಲ್ಲಿ ಹಣಗಳಿಸಲು ಬಾರೀ ವಂಚನೆ ನಡೆಸುವ ನಯವಂಚಕ ತಂಡ ಸಕ್ರಿಯವಾಗಿದೆ. ಅಪರಿಚಿತ ತಂಡವೊಂದು ನಿಮ್ಮಲ್ಲಿಗೆ ಬಂದು ವಿಚಾರಿಸಿ ಹಳೆಯದಾದ ತಂತಿಯನ್ನು ಮತ್ತೆ ಬಿಗಿಯದಿದ್ದಲ್ಲಿ ಕಡಿದು ಅಪಾಯವಾಗುವ ಎಚ್ಚರಿಕೆ ನೀಡುವರು. ಇದರ ಭಯದಿಂದ ತಂಡಕ್ಕೆ ಮರಕ್ಕೆ ತಂತಿ ಬಿಗಿಯಲು ಒಪ್ಪಿಗೆ ನೀಡುವರು. ಬಳಿಕ ತಂಡದ ಈರ್ವರು ಮರಕ್ಕೆ ತಂತಿ ಬಿಗಿಯಲು ಆರಂಭಿಸುವರು.ಇದರ ಮಧ್ಯೆ ಓರ್ವ ತಕ್ಷಣ ತಂತಿ ಕಡಿದು ಹೋಯಿತು, ನನ್ನ ಕೈಗೆ ತಂತಿತಾಗಿ ಘಾಸಿಯಾಯಿತು. ಏನಾದರೂ ಮದ್ದು ಇದ್ದಲ್ಲಿ ಕೊಡಿರೆಂಬುದಾಗಿ ಕಪಟ ನಾಟಕ ಮಾಡುವರು.
ಔಷಧಿ ಹಚ್ಚಿದ ಬಳಿಕ ತುಂಡಾದ ಕಬ್ಬಿಣವನ್ನು ಹೊಸ ತಂತಿಯೊಂದಿಗೆ ಜೋಡಿಸಿ ಮತ್ತೆ ಬಿಗಿಯೋಣವೆಂಬುದಕ್ಕೆ ಮನೆಯವರು ಅನಿವಾರ್ಯವಾಗಿ ಒಪ್ಪುವರು. ಕ್ಷಣಾರ್ಧದಲ್ಲಿ ಇಬ್ಬರು ತಂತಿ ಬಿಗಿದ ಮರಗಳಿಗೆ ತಂತಿ ಬೆಲೆ ಮೀಟರ್‍ಗೆ 150 ಎನ್ನುವರು. ಹೀಗೆ ತಂತಿ ಬಿಗಿಯುವ ಕೆಲಸ ಮುಗಿದು ಬಿಲ್ ಎಷ್ಟಾಯಿತೆಂದು ಕೇಳಿದಾಗ ದುಬಾರಿ ತಂತಿ ಬೆಲೆ ಮೀಟರ್ ಉದ್ದ ಸಹಸ್ರಗಟ್ಟಲೆ ಚಾರ್ಜ್ ಹೇಳುವರು. ಜೊತೆಗೆ ಪ್ರಶ್ನಿಸಿದಾಗ ನೀವು ತಂತಿ ಬೆಲೆ ಮೀಟರ್‍ಗೆ ಹೇಳಿದ್ದಲ್ಲವೇ ಎಂದಾಗ ಅಲ್ಲ ಸರ್ ಮೀಟರ್ ಲೆಕ್ಕ ನಿಮಗೆ ಹಾಗೆ ಕೇಳಿಸಿದ್ದಾಗಿರ ಬಹುದೆಂದು ಸಬೂಬು ನೀಡುವರು. ಅಂತೂ ಇವರಲ್ಲಿ ಬಲವಾದ ಸಂಶಯ ತೋಚಿ ತಂತಿ ಎಸ್ಟು ಮೀಟರ್ ಬಿಗಿದಿರುವುದೆಂಬುದಾಗಿ ಹೇಳಿ ಚೌಕಾಸಿ ಮಾಡಿದಾಗ ಮನೆಯವರು ಹಣ ಕೊಟ್ಟು ಕಳಿಸುವರು.
ಆರೋಪಿಗಳು ತೆರಳಿದ ಬಳಿಕ ತಂತಿ ಉದ್ದ ಅಳೆದಾಗ ಆರೋಪಿಗಳು ಹೇಳಿದ ಉದ್ದ 88 ಫೀಟ್ ಆಗಿರದೆ ಕೇವಲ 50 ಫೀಟ್ ಮಾತ್ರವಾಗಿತ್ತು. ಈ ಕುರಿತು ಕೇಳಲು ವಂಚಕರ ಪತ್ತೆಗೆ ಮೊಬೈಲ್ ಆಗಲಿ ಬ್ಯಾಂಕ್ ಖಾತೆಯ ವಿವರವೂ ಕೊಟ್ಟಿರುವುದಿಲ್ಲ. ತೆಂಗಿಗೆ ತಂತಿ ಬಿಗಿದ ಬಳಿಕ ಮನೆ ಮಾಲಕರು ಚರ್ಚಿಸಿದರೂ ಕಿವಿಗೊಡದೆ ವಂಚಕರು ಅಲ್ಲಿಂದ ಕಾಲು ಕೀಳುವರು. ವಂಚಕರು ತಮ್ಮ ಕುರಿತು ಹೆಚ್ಚಿನ ಮಾಹಿತಿ ನೀಡಲು ಒಪ್ಪದೆ ವಂಚಕರ ವಂಚನೆಗೆ ಒಳಗಾದ ಮನೆ ಮಾಲಕರು ದೂರು ನೀಡಲು ಹಿಂಜರಿಯುವರು. ಆದರೆ ಇತ್ತೀಚೆಗೆ ತಂಡದಿಂದ ವಂಚನೆಗೊಳಗಾದ ಮಾಜಿ ಗ್ರಾ.ಪಂ.ಅಧ್ಯಕ್ಷರು ಜಿಲ್ಲಾ ಉನ್ನತ ಪೋಲೀಸ್ ಅಧಿಕಾರಿಗೆ ದೂರು ನೀಡಿದರು. ದೂರನ್ನು ಆಲಿಸಿದ ಎಸ್‍ಪಿ ಅವರು ಇದರ ಸಮಗ್ರ ತನಿಖೆ ನಡೆಸಿ ಕ್ರಮಕೈಗೊಳ್ಳಲು ಕುಂಬಳೆ ಠಾಣೆಗೆ ದೂರನ್ನು ಹಸ್ತಾಂರಿಸಿದರು.
ಬಳಿಕ ಆರೋಪಿಗಳ ಬ್ಯಾಂಕ್ ಖಾತೆಯ ವಿವರ ಸಂಗ್ರಹಿಸಿದಾಗ ಸಾಬಿರ್ ಎಂಬಾತ ಪ್ರಧಾನ ಆರೋಪಿಯಾಗಿದ್ದು ತಂಡವನ್ನು ಠಾಣೆಗೆ ಕರೆಸಿ ತನಿಖೆ ನಡೆಸಿ ಆರೋಪಿಗಳು ಹಣ ದುಪ್ಪಟ್ಟು ವಶೀಲಿ ಮಾಡಿರುವುದನ್ನು ಖಚಿತಪಡಿಸಿ ಬಾಕಿ ಹಣವನ್ನು ಮರುಪಾವತಿಸಲು ಮತ್ತು ಮುಂದೆ ಇಂತಹಾ ವಂಚನೆಯನ್ನು ಮಾಡದಿರುವಂತೆ ಎಚ್ಚರಿಕೆ ನೀಡಿದರು. ಮುಂದೆ ಈ ರೀತಿಯ ವಂಚನೆಗೆ ಒಳಗಾಗ ಬಾರದೆಂಬುದಾಗಿಯೂ ಆಗಿದ್ದರೆ ದೂರು ನೀಡಲು ಹಿಂಜರಿಯ ಬಾರದೆಂಬುದಾಗಿ ಸಾರ್ವಜನಿಕರಿಗೆ ಪೋಲೀಸರು ತಿಳಿಸಿದ್ದಾರೆ.




