ಬದಿಯಡ್ಕ: ಕಾರ್ಯಕರ್ತರು ಅತ್ಯಧಿಕ ಸಂಖ್ಯೆಯಲ್ಲಿರುವ ಬದಿಯಡ್ಕ ಪಂಚಾಯಿತಿಯ ಪಶ್ಚಿಮ ವಲಯದಲ್ಲಿ ಕಾರ್ಯಾಲಯದ ಅಗತ್ಯತೆಯನ್ನು ಮನಗಂಡು ನೀರ್ಚಾಲಿನ ಹೃದಯ ಭಾಗದಲ್ಲಿ ಪಕ್ಷದ ಕಚೇರಿಯನ್ನು ತೆರೆದಿರುವುದು ನಮ್ಮ ಬಲವರ್ಧನೆಗೆ ಪೂರಕವಾಗಲಿದೆ. ಮುಂದಿನ ಚುನಾವಣೆಯಲ್ಲಿ ಗ್ರಾಮಪಂಚಾಯಿತಿಯ ಆಡಳಿತವು ಬಿಜೆಪಿ ಪಕ್ಷದ್ದು ಆಗಬೇಕು. ಇದಕ್ಕಾಗಿ ಕಾರ್ಯಕರ್ತರು ಒಗ್ಗಟ್ಟಿನಿಂದ ಮುಂದುವರಿದು ತಳಮಟ್ಟದಲ್ಲಿ ಪ್ರತಿಮನೆಯನ್ನು ಸಂಪರ್ಕಿಸಬೇಕು ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷೆ ಅಶ್ವಿನಿ ಎಂ.ಎಲ್. ಹೇಳಿದರು.
ಮಂಗಳವಾರ ನೀರ್ಚಾಲಿನಲ್ಲಿ ಬಿಜೆಪಿ ಬದಿಯಡ್ಕ ಪಂಚಾಯತಿ ಪಶ್ಚಿಮ ವಲಯ ಚುನಾವಣಾ ಕಚೇರಿಯನ್ನು ದೀಪಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಾಯಪೂರ್ತಿಯಾದ ಎಲ್ಲರಿಗೂ ಮತಚಲಾಯಿಸುವುದಕ್ಕಾಗಿ ಮತದಾರರ ಪಟ್ಟಿಯಲ್ಲಿ ಅವರ ಹೆಸರನ್ನು ಸೇರ್ಪಡೆಗೊಳಿಸಲು ಇನ್ನೂ ಅವಕಾಶವಿದೆ. ಎಲ್ಲರೂ ಈ ಒಂದು ಕಾರ್ಯದಲ್ಲಿ ಹಿಂದೆಮುಂದೆ ನೋಡದೆ ಜನರೊಂದಿಗೆ ಸಂಪರ್ಕದಲ್ಲಿರಬೇಕು ಎಂದು ತಿಳಿಸಿದ ಅವರು ಪ್ರಸ್ತುತ ಮುಸ್ಲಿಂಲೀಗ್ ಆಡಳಿತವು ಬದಿಯಡ್ಕ ಗ್ರಾಮಪಂಚಾಯಿತಿಗೆ ಶಾಪವಾಗಿ ಪರಿಣಮಿಸಿದೆ. ಅಭಿವೃದ್ಧಿಕಾರ್ಯಗಳು ನಡೆಯದೆ ಜನರಿಗೆ ಲಭಿಸಬೇಕಾದ ಸವಲತ್ತುಗಳು ನಷ್ಟವಾಗಿದೆ. ಉದ್ಯೋಗಸ್ಥರಿಲ್ಲದ ಗ್ರಾಮಪಂಚಾಯಿತಿ ಕಚೇರಿಯಲ್ಲಿ ತಮ್ಮ ಅಗತ್ಯತೆಗಳಿಗಾಗಿ ಜನರು ಅಲೆದಾಡುವಂತಾಗಿದೆ. ಆದುದರಿಂದ ಬದಿಯಡ್ಕದ ಆಡಳಿತವನ್ನು ಪಡೆದು ನಾಡಿನ ಅಭಿವೃದ್ಧಿಯಲ್ಲಿ ನಮ್ಮ ಕೊಡುಗೆಯನ್ನು ನೀಡಬೇಕು ಎಂದರು.
ಬಿಜೆಪಿ ಬದಿಯಡ್ಕ ಪಂಚಾಯಿತಿ ಪಶ್ಚಿಮ ವಲಯ ಸಮಿತಿ ಅಧ್ಯಕ್ಷ ಮಹೇಶ್ ವಳಕ್ಕುಂಜ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾರ್ಯಕರ್ತರು ಸಂಘಟಿತರಾಗುತ್ತಿರುವುದು ಪಕ್ಷಕ್ಕೆ ಬಲವನ್ನು ತಂದಿದೆ. ಚುನಾವಣೆಯನ್ನು ಸಮರ್ಥವಾಗಿ ಎದುರಿಸಲು ಕಾರ್ಯಕರ್ತರು ಹೆಗಲಿಗೆ ಹೆಗಲುಕೊಟ್ಟು ಜೊತೆಗೂಡಬೇಕಾಗಿ ಕರೆಯಿತ್ತ ಅವರು ಪಶ್ಚಿಮ ವಲಯ ನೂತನ ಸಮಿತಿಯನ್ನು ಘೋಷಿಸಿದರು.
ಬಿಜೆಪಿ ಕೋಝಿಕ್ಕೋಡು ವಲಯ ಪ್ರಧಾನ ಕಾರ್ಯದರ್ಶಿ ಎಂ ಸುಧಾಮ ಗೋಸಾಡ, ಬಿಜೆಪಿ ಬದಿಯಡ್ಕ ಮಂಡಲ ಅಧ್ಯಕ್ಷ ಗೋಪಾಲಕೃಷ್ಣ ಮುಂಡೋಳುಮೂಲೆ, ರಾಜ್ಯ ಸಮಿತಿ ಸದಸ್ಯ ರಾಮಪ್ಪ ಮಂಜೇಶ್ವರ, ಜಿಲ್ಲಾ ಉಪಾಧ್ಯಕ್ಷರುಗಳಾದ ಶಂಕರ ಡಿ., ಮುರಳೀಧರ ಯಾದವ್ ನಾಯ್ಕಾಪು, ಜಿಲ್ಲಾ ಕಾರ್ಯದರ್ಶಿ ಅಶ್ವಿನಿ ಮೊಳೆಯಾರು, ಜಿಲ್ಲಾ ಸಮಿತಿ ಜಾಲತಾಣ ಪ್ರಮುಖ ಸುಕುಮಾರ ಕುದ್ರೆಪ್ಪಾಡಿ, ಮಂಡಲ ಪ್ರಮುಖರಾದ ರವೀಂದ್ರ ರೈ ಗೋಸಾಡ, ಅವಿನಾಶ್ ರೈ ಬದಿಯಡ್ಕ, ಜಯಂತಿ ಕುಂಟಿಕಾನ, ರಾಮಕೃಷ್ಣ ಹೆಬ್ಬಾರ್, ಬಾಲಗೋಪಾಲ ಏಣಿಯರ್ಪು, ಮಂಡಲ ಕೋಶಾಧಿಕಾರಿ ಎಂ.ನಾರಾಯಣ ಭಟ್, ಜನಪ್ರತಿನಿಧಿಗಳು, ಪರಿವಾರ ಸಂಘಟನೆಯ ಪ್ರಮುಖರು, ಕಾರ್ಯಕರ್ತರು ಪಾಲ್ಗೊಂಡಿದ್ದರು. ವಲಯ ಸಮಿತಿ ಉಪಾಧ್ಯಕ್ಷ ಮಧುಚಂದ್ರ ಮಾನ್ಯ ಸ್ವಾಗತಿಸಿ, ಮಂಡಲ ಕಾರ್ಯದರ್ಶಿ ರಜನಿ ಸಂದೀಪ್ ವಂದಿಸಿದರು.
ಅ.5 ರಂದು ರಜತ ಶಂಕರ ಗೌರವಾಭಿನಂದನೆ ಯಶಸ್ಸಿಗೆ ಕರೆ :
ಬಿಜೆಪಿ ಬದಿಯಡ್ಕ ಪಂಚಾಯಿತಿ ಸಮಿತಿ ಬೃಹತ್ ಸಮಾವೇಶ ಹಾಗೂ ರಜತಶಂಕರ ಗೌರವಾಭಿನಂದನೆ ಅಕ್ಟೋಬರ್ 5 ರಂದು ಬೇಳ ವಿಷ್ಣುಮೂರ್ತಿ ನಗರದಲ್ಲಿರುವ ವಿ.ಎಂ.ಆಡಿಟೋರಿಯಂನಲ್ಲಿ ಬೆಳಗ್ಗೆ 9.30ಕ್ಕೆ ನಡೆಯಲಿದೆ. ಬೆಳಗ್ಗೆ 9ಕ್ಕೆ ನೀರ್ಚಾಲು ಪೇಟೆಯಿಂದ ಡಿ.ಶಂಕರ ಅವರನ್ನು ತೆರದ ವಾಹನದಲ್ಲಿ ಮೆರವಣಿಗೆಯ ಮೂಲಕ ಸಭಾಂಗಣಕ್ಕೆ ಬರಮಾಡಿಕೊಳ್ಳುವುದು, 9.30ಕ್ಕೆ ಧ್ವಜಾರೋಹಣ ಧಾರ್ಮಿಕ ಮುಂದಾಳು ಬಾಬು ಪಚ್ಲಂಪಾರೆ ಇವರಿಂದ, ಸಭಾ ಕಾರ್ಯಕ್ರಮವನ್ನು ವಿಶ್ವಹಿಂದೂಪರಿಷತ್ ಕಾಸರಗೋಡು ಜಿಲ್ಲಾ ಅಧ್ಯಕ್ಷ ಜಯದೇವ ಖಂಡಿಗೆ ಇವರ ಅಧ್ಯಕ್ಷತೆಯಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶೋಭಾ ಸುರೇಂದ್ರನ್ ಉದ್ಘಾಟಿಸಲಿದ್ದಾರೆ. ಮಾಜಿ ಸಂಸದ, ಕರ್ನಾಟಕ ರಾಜ್ಯ ನಿಕಟಪೂರ್ವ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಪ್ರಮುಖರಾದ ಕೆ.ಶ್ರೀಕಾಂತ್, ಅಶ್ವಿನಿ ಎಂ.ಎಲ್., ಎಂ. ಸಂಜೀವ ಶೆಟ್ಟಿ ಮೊಟ್ಟೆಕುಂಜ, ರವೀಶ ತಂತ್ರಿ ಕುಂಟಾರು, ರಾಮಪ್ಪ ಮಂಜೇಶ್ವರ, ಎಂ.ಸುಧಾಮ ಗೋಸಾಡ, ಸುನಿಲ್ ಪಿ.ಆರ್., ಗೋಪಾಲಕೃಷ್ಣ ಮುಂಡೋಳುಮೂಲೆ ಸಹಿತ ಪಕ್ಷದ ಜಿಲ್ಲಾ, ಮಂಡಲ, ವಲಯ ಪ್ರಮುಖರು ಪಾಲ್ಗೊಳ್ಳಲಿದ್ದಾರೆ.




.jpg)
